Advertisement

ಮನುಕುಲಕ್ಕಾಗಿ ಭಿಕ್ಷೆ- ಬಡವರ ಬದುಕಿಗೆ ಶ್ರೀರಕ್ಷೆ; ಜೋಳಿಗೆ ಹಾಕಿದ ಅನಿಲ್‌ ಮೆಣಸಿನಕಾಯಿ

08:54 AM May 05, 2020 | Hari Prasad |

ಗದಗ: ಕೋವಿಡ್ ಲಾಕ್‌ಡೌನ್‌ ಘೋಷಣೆಯಾದ ನಂತರ ಗದಗ ಮತಕ್ಷೇತ್ರದ ಜನರ ಸಂಕಷ್ಟ ನೀಗಿಸಲು ಟೊಂಕಕಟ್ಟಿ ನಿಂತಿರುವ ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ಆರಂಭಿಸಿರುವ ‘ಮನುಕುಲಕ್ಕಾಗಿ ಭಿಕ್ಷೆ’ ಅಭಿಯಾನ ಬಡವರ ಪಾಲಿಗೆ ಅಕ್ಷಯ ಪಾತ್ರೆಯಾಗಿದೆ.!

Advertisement

ಮಹಾಮಾರಿ ಕೋವಿಡ್ ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ದೇಶದಲ್ಲಿ ಕೋವಿಡ್ ಸೋಂಕು ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಜಾರಿಗೊಳಿಸಿದ್ದಾರೆ. ಇದರಿಂದಾಗಿ ಗದಗ – ಬೆಟಗೇರಿ ಅವಳಿ ನಗರದ ಸಣ್ಣ- ಪುಟ್ಟ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ನೇಕಾರಿಕೆ, ಗ್ಯಾರೇಜ್‌ ಹೀಗೆ ವಿವಿಧ ವಲಯಗಳ ಉತ್ಪಾದನಾ ಕ್ಷೇತ್ರಗಳು ಸ್ತಬ್ಧಗೊಂಡಿವೆ.

ಕುಲವೃತ್ತಿ ಹಾಗೂ ನಿತ್ಯ ದುಡಿಮೆಯನ್ನೇ ನಂಬಿದವರು ಕೆಲಸವಿಲ್ಲದೇ ತತ್ತರಿಸಿದ್ದಾರೆ. ಮನೆಯಲ್ಲಿದ್ದ ಅಡುಗೆ ಸಾಮಗ್ರಿಯೂ ಖಾಲಿಯಾಗಿ ಮುಂದೇನು? ತಮ್ಮೊಂದಿಗೆ ಮಕ್ಕಳ ಹೊಟ್ಟೆ ತುಂಬಿಸುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ, ‘ಮನುಕುಲಕ್ಕಾಗಿ ಭಿಕ್ಷೆ’, ‘ರೈತರ ಕೊಡುಗೆ’ ಎಂಬ ಅಭಿಯಾನ ಕೈಗೊಂಡು ಅವಳಿ ನಗರದ ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಎರಡೂ ಘೋಷವಾಕ್ಯಗಳು ಭಿನ್ನವಾಗಿದ್ದರೂ, ಲಾಕ್ ‌ಡೌನ್‌ ವೇಳೆ ಉಳ್ಳವರು- ಉಣ್ಣುವವರ ಮಧ್ಯೆ ಸಂಪರ್ಕ ಬೆಸೆಯುತ್ತವೆ. ಮನುಕುಲಕ್ಕಾಗಿ ರೈತರಿಂದ ಭಿಕ್ಷೆ ಪಡೆದು, ಅದೇ ವಸ್ತುಗಳನ್ನು ರೈತರ ಕೊಡುಗೆಯಾಗಿ ಬಡವರಿಗೆ ತಲುಪಿಸುವುದೇ ಅಭಿಯಾನದ ಆಶಯ ಎನ್ನುತ್ತಾರೆ ಸಂಘಟಕರು.


ಗದುಗಿನ ಸಿದ್ದರಾಮೇಶ್ವರ ನಗರದಲ್ಲಿ ಫಲಾನುಭವಿಗಳಿಗೆ ಅನಿಲ್‌ ಮೆಣಸಿನಕಾಯಿ ಅವರ ಕಿಟ್‌ ವಿತರಿಸಲಾಯಿತು.

Advertisement

ಜನ ಸೇವೆಗೆ ಅಭೂತಪೂರ್ವ ಸ್ಪಂದನೆ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಕೇಂದ್ರ, ರಾಜ್ಯ ಸರಕಾರದಿಂದ ಅಗತ್ಯ ಪಡಿತರ ವಿತರಿಸಲಾಗಿದೆ. ವಿವಿಧ ಕಾರ್ಮಿಕರಿಗೆ ಸಹಾಯಧನ ಘೋಷಿಸಿದೆ. ಆದರೂ, ತಕ್ಷಣಕ್ಕೆ ಬೇಕಾಗುವ ಕಾಳು-ಕಡಿ, ತರಕಾರಿ ಹಾಗೂ ದಿನ ಬಳಕೆ ವಸ್ತಗಳನ್ನು ಒದಗಿಸಲು ತಾವೇ ವೈಯಕ್ತಿಕವಾಗಿ 10-15 ಲಕ್ಷ ರೂ. ಮೊತ್ತದಲ್ಲಿ ನೆರವಿನ ಕಿಟ್‌ ನೀಡಲು ಚಿಂತನೆ ನಡೆಸಿದ್ದರು.

ಆದರೆ, ಅವಳಿ ನಗರದಲ್ಲಿ ಸುಮಾರು 20 ಸಾವಿರಕ್ಕಿಂತ ಹೆಚ್ಚು ಬಡ ಕುಟುಂಬಗಳಿಗೆ ನೆರವಿನ ಅಗತ್ಯತೆ ಇರುವುದನ್ನು ಮನಗಂಡು, ಇವರೆಲ್ಲರಿಗೆ ನೆರವು ನೀಡುವುದು ಹೇಗೆ ಎಂಬ ಚಿಂತೆ ಕಾಡಿತು. ಅದಕ್ಕಾಗಿ ತಮ್ಮಂತೆಯೇ ಸಹೃದಯಿಗಳು, ಕೊಡುಗೈ ದಾನಿಗಳು, ರೈತರಿಂದ ನೆರವು ಪಡೆದು, ಬಡವರ ಹೊಟ್ಟೆ ತುಂಬಿಸಲು ಅನಿಲ್‌ ಮೆಣಸಿನಕಾಯಿ ಹೆಗಲಿಗೆ ಜೋಳಿಗೆ ಹಾಕಿದ್ದಾರೆ. ಏ.15 ರಿಂದ ದಾನಿಗಳಿಂದ ಕಾಳು, ಕಡಿ ಸಂಗ್ರಹಣೆಗಾಗಿ ಊರೂರು ಸುತ್ತುತ್ತಿದ್ದಾರೆ.


ಗ್ರಾಮವೊಂದರಲ್ಲಿ ಅನಿಲ್‌ ಮೆಣಸಿನಕಾಯಿ ಅವರ ಜೋಳಿಗೆಗೆ ಧಾನ್ಯ ಹಾಕುತ್ತಿರುವ ಮಹಿಳೆಯರು.

ಈ ಅಭಿಯಾನಕ್ಕೆ ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಗದಗ- ಬೆಟಗೇರಿಯಲ್ಲದೇ, ಜಿಲ್ಲೆಯ ವಿವಿಧೆಡೆಯಿಂದ ದಾನಿಗಳು ಅನಿಲ್‌ ಅವರೊಂದಿಗೆ ಕೈ ಜೋಡಿಸಿದ್ದಾರೆ. ವರ್ಷವಿಡೀ ಬೆವರು ಸುರಿಸಿ ಬೆಳೆದ ಫಸಲಿನ ಭಾಗಶಃ ಜೋಳ, ಕಡಲೆ, ಈರುಳ್ಳಿ ಸೇರಿದಂತೆ ಮತ್ತಿತರೆ ಕಾಳು-ಕಡಿಯನ್ನು ಅನಿಲ್‌ ಅವರ ಜೋಳಿಗೆಗೆ ಸುರಿದಿದ್ದಾರೆ. ಸ್ಥಳೀಯ ವ್ಯಾಪಾಸ್ಥರು ಸಕ್ಕರೆ, ಚಹಾಪುಡಿ, ಗೋಧಿ ಹಿಟ್ಟು, ಆಹಾರ ಹಾಗೂ ಜೀವನಕ್ಕೆ ಅಗತ್ಯವಿರುವ ಮತ್ತಿತರೆ ವಸ್ತುಗಳನ್ನು ನೀಡುವ ಮೂಲಕ ಬಡವರ ಸಂಕಷ್ಟ ಪರಿಹಾರಕ್ಕೆ ಸಾಥ್‌ ನೀಡುತ್ತಿದ್ದಾರೆ.

ಇದಲ್ಲದೆ ಜನ ಸಾಮಾನ್ಯರು ಕೂಡಾ ತಮ್ಮಿಂದಾದ ನೆರವು ನೀಡಿದ್ದಾರೆ. ಕೆಲವರು 5 ರಿಂದ 10 ಸಾವಿರ ರೂ. ನೀಡಿದರೆ, ಇನ್ನೂ ಕೆಲವರು 500 ರೂ. ನೀಡಿ ಅನಿಲ್‌ ಅವರ ಮಾನವೀಯ ಕಾರ್ಯಕ್ಕೆ ಶಕ್ತಿ ತುಂಬಿದ್ದಾರೆ ಎನ್ನುತ್ತಾರೆ ಪ್ರಶಾಂತ ನಾಯ್ಕರ, ರಾಘವೇಂದ್ರ ಯಳವತ್ತಿ.

ನನ್ನ ನಡೆ, ಜನರ ಕಡೆ, ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವ, ಸದಾ ಜನಸಾಮಾನ್ಯರ ಶ್ರೇಯಸ್ಸಿಗಾಗಿ ಹಂಬಲಿಸುವ ಬಿಜೆಪಿ ಯುವ ನಾಯಕ ಅನಿಲ್‌ ಮೆಣಸಿನಕಾಯಿ ಅವರ ಈ ಪರಿಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ನುಡಿಗಳು ಕೇಳಿ ಬರುತ್ತಿವೆ.


ಹೊಸಹಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಅವರು ‘ಮನುಕುಲದ ಜೋಳಿಗೆ’ಗೆ ಧಾನ್ಯ ತುಂಬಿದರು.

ಇದು ರೈತರ ಕೊಡುಗೆ: ಮನುಕುಲದ ಕಲ್ಯಾಣಕ್ಕಾಗಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರಂಭಿಸಿರುವ ಭಿಕ್ಷಾ ಅಭಿಯಾನದ ಜೋಳಿಗೆಗೆ ರೈತರಿಂದ ದವಸ ಧಾನ್ಯಗಳ ರಾಶಿಯೇ ಹರಿದು ಬರುತ್ತಿದೆ. ನೆರೆ – ಬರ, ಸಂಕಷ್ಟದ ಕಾರ್ಮೋಡದ ಮಧ್ಯೆಯೂ ಅನಿಲ್‌ ಅವರ ಕರೆಗೆ ರೈತರು ಧ್ವನಿಗೂಡಿಸಿದ್ದಾರೆ. ತಾವು ಬೆಳೆದ ಫಸಲಿನಲ್ಲಿ ಶೇ.40 ರಿಂದ 70 ರಷ್ಟು ಧವಸ-ಧಾನ್ಯಗಳನ್ನು ಮನುಕುಲದ ಜೋಳಿಗೆಗೆ ಸುರಿದು, ನಿಸ್ವಾರ್ಥ ಸೇವೆಗೆ ಕೈಜೋಡಿಸಿದ್ದಾರೆ.

ಅಭಿಯಾನದ ಮೊದಲ ದಿನವೇ ಸೊರಟೂರು ಗ್ರಾಮಸ್ಥರು 30 ಚೀಲ ಜೋಳ, 15 ಚೀಲ ಕಡಲೆ, 5 ಚೀಲ ಉಳ್ಳಾಗಡ್ಡಿ, ತಾಲೂಕಿನ ಕುರ್ತಕೋಟಿ ಗ್ರಾಮದ ಇಸರಿ ಕುಟುಂಬದಿಂದ 30 ಕ್ವಿಂಟಲ್‌ ಜೋಳ, ಹೊಸಳ್ಳಿಯ ಮಲ್ಲಿಕಾರ್ಜುನಪ್ಪ ಮುಳಗುಂದ ಅವರು 10 ಕ್ವಿಂಟಾಲ್‌ ಜೋಳ, 1 ಕ್ವಿಂಟಾಲ್‌ ಕಡ್ಲಿ, ಹುಲಕೋಟಿ ಯಲ್ಲಿ 10 ಚೀಲ ಉಳ್ಳಾಗಡ್ಡಿ, 2 ಚೀಲ ಕಡ್ಲಿ, 5 ಪ್ಯಾಕೇಟ್‌ ಅಕ್ಕಿ ನೀಡಿ ಉದಾರತೆ ಮೆರೆದಿದ್ದಾರೆ.

ಇದಲ್ಲದೆ ವಿವಿಧ ಗ್ರಾಮಗಳ ರೈತರು ಮತ್ತು ನಗರದ ವರ್ತಕರು, ದಾನಿಗಳಿಂದ ಸುಮಾರು 300 ಕ್ವಿಂಟಾಲ್‌ ಜೋಳ, ತೊಗರಿಬೇಳೆ, ಕಡಲೆ, ರವೆ, ಸಕ್ಕರೆ 100 ಕ್ವಿಂಟಾಲ್‌, ನೂರು ಕೆಜಿ ಬೆಲ್ಲ, ಚಹಾಪುಡಿ ಡಬ್ಬಿ, ಜೀರಿಗೆ, ಸಾಸಿವೆ, ಅರಿಷಿಣಪುಡಿ, ಖಾರದಪುಡಿ, 1 ಲೀ. ಅಡುಗೆ ಎಣ್ಣೆಯ 10 ಸಾವಿರ ಪ್ಯಾಕೇಟ್‌ ಹಾಗೂ ವಿವಿಧ ತರಕಾರಿಯನ್ನೂ ದಾನ ನೀಡುತ್ತಿದ್ದು, ದಾನಿಗಳ ಪಟ್ಟಿಯೂ ದೊಡ್ಡದಿದೆ.


ಅನಿಲ್‌ ಅಭಿಯಾನಕ್ಕೆ ಪೂಜ್ಯರ ಶ್ರೀರಕ್ಷೆ

ನಡೆದಾಡುವ ದೇವರು ಪಂ|ಪುಟ್ಟರಾಜಕವಿ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜನವರು, ವ್ಯವಸ್ಥಾಪಕ ಬಸವರಾಜ ಚ. ಹಿಡ್ಕಮಠ ಜೋಳಿಗೆ ಹಾಕಿ, ಶುಭ ಕೋರಿದ್ದಾರೆ. ಹೊಸಹಳ್ಳಿಯ ಬೂದೀಶ್ವರ ಸ್ವಾಮೀಜಿ, ನೀಲಗುಂದದ ಗುದ್ನೇಶ್ವಮಠದ ಪ್ರಭುಲಿಂಗ ದೇವರು ಅವರು ಧಾನ್ಯ ನೀಡಿ, ಮೆಣಸಿನಕಾಯಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಜೋಳಿಗೆ ಸೇರಿತು ದೇವರ ಮುಡುಪು


ನಾಗಾವಿ ಗ್ರಾಮದ ಶಿವಲಿಂಗಮ್ಮ ಹಿರೇಮಠ ಅವರು ದೇವರಿಗೆ ಪ್ರತಿದಿನ ಪೂಜೆ ವೇಳೆ ಕೂಡಿಡುವ ಮುಡುಪಿನ ಹಣವನ್ನೇ ಮನುಕುಲ ಕಲ್ಯಾಣಕ್ಕಾಗಿ ಅನೀಲ ಮೆಣಸಿನಕಾಯಿ ಅವರು ಆರಂಭಿಸಿರುವ ಭಿಕ್ಷಾ ಜೋಳಿಗೆಗೆ ಹಾಕಿದರೆ, ಬೆಟಗೇರಿಯ ಅಖಂಡಪ್ಪ ಬಡಿಗೇರ ಅವರು 10 ಸಾವಿರ ರೂ. ದೇಣಿಗೆ ನೀಡಿ, ಮಾನವೀಯತೆ ಮೆರೆದರು.

ಬರಲಿದೆ ಫೀಡ್‌ ಬ್ಯಾಕ್‌ಗೆ ಕಾಲ್‌..
ಹಲೋ, ನಿಮಗೆ ರೈತರ ಕೊಡುಗೆ ಕಿಟ್‌ ತಲುಪಿದೆಯಾ…? ಇದು ಯಾವುದೋ ಬ್ಯಾಂಕ್‌ ಅಥವಾ ಮೊಬೈಲ್‌ ಕಂಪನಿಯ ಕರೆ ಅಲ್ಲ. ಅನಿಲ್‌ ಮೆಣಸಿನಕಾಯಿ ಅವರು ನಡೆಸಿರುವ ಅಭಿಯಾನದ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸದ್ಯದಲ್ಲೆ ಕಾಲ್‌ಸೆಂಟರ್‌ ಮೂಲಕ ಕರೆ ಬರಲಿದೆ. ಈಗಾಗಲೇ ಕಿಟ್‌ ಪಡೆದವರ ಮೊಬೈಲ್‌ ನಂಬರ್‌ ಸಂಗ್ರಹಿಸಿದೆ. ಈ ಮೂಲಕ ಕಿಟ್‌ ಬಗ್ಗೆ ಜನಾಭಿಪ್ರಾಯ ತಿಳಿಯುವುದು ಇದರ ಉದ್ದೇಶ.

ಅನ್ನದಾತನ ಪಾದಪೂಜೆ..


ಬರ- ನೆರೆ ಮಧ್ಯೆಯೂ ಜಿಲ್ಲೆಯ ರೈತರು ಅಷ್ಟಿಷ್ಟು ಬೆಳೆದಿದ್ದಾರೆ. ಅದರಲ್ಲೇ ಮನು ಕುಲಕ್ಕಾಗಿ ಭಿಕ್ಷೆ ಅಭಿಯಾನಕ್ಕೆ ಒಂದು ಬೊಗಸೆಯಿಂದ 30 ಕ್ವಿಂಟಾಲ್‌ ವರೆಗೆ ಧಾನ್ಯಗಳನ್ನು ನೀಡಿರುವ ರೈತರಿಗೆ ಸಮಾನವಾಗಿ ಪಾದ ಪೂಜೆ ಮಾಡಿ, ಭಕ್ತಿ ಅರ್ಪಿಸಿದ್ದಾರೆ.

ಹಿರಿಯರ ಮಾರ್ಗದರ್ಶನ
ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ಮೊಹನ ಮಾಳಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕಾಂತಿಲಾಲ್‌ ಬನ್ಸಾಲಿ, ಎಸ್‌.ಟಿ.ಮೇಲಗಿರಿ, ರಾಜು ಕುರಡಗಿ, ಶಂಕ್ರಪ್ಪ ಇಂಡಿ, ಸಿದ್ದು ಪಲ್ಲೇದ, ಆನಂದ ಶೇಠ, ಆನಂದ ಗುರುಸ್ವಾಮಿ ಮತ್ತಿತರರು ಕಾಲಕಾಲಕ್ಕೆ ಅಗತ್ಯ ಸಲಹೆ, ಸೂಚನೆ ನೀಡುತ್ತಿದ್ದಾರೆ.


‘ಮಾನವೀಯತೆಗಾಗಿ ಭಿಕ್ಷೆ’ಯಡಿ ಅನಿಲ್‌ ಮೆಣಸಿನಕಾಯಿ ಸಂಗ್ರಹಿಸಿದ ಆಹಾರ ಧಾನ್ಯಗಳ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಚಾಲನೆ ನೀಡಿದರು.

ಅಭಿಯಾನದ ಹಿಂದಿದೆ ದೊಡ್ಡ ಕಾರ್ಯಪಡೆ
ಮನುಕುಲಕ್ಕಾಗಿ ಭಿಕ್ಷಾ ಅಭಿಯಾನಕ್ಕೆ ದೊಡ್ಡ ಮಟ್ಟದ ಪಡೆಯಿದೆ. ಮೂರು ವಿಭಾಗಗಳಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಜೋಳಿಗೆ ತಂಡ: ಅನಿಲ್‌ ಮೆಣಸಿನಕಾಯಿ, ಎಂ.ಎಂ.ಹಿರೇಮಠ, ಸಂಗಣ್ಣ ಬಂಗಾರ ಶೆಟ್ರ, ರವಿ ಶಿದ್ಲಿಂಗ್‌, ಪ್ರಶಾಂತ ನಾಯ್ಕರ್‌, ಮಹೇಶ ದಾಸರ, ಬಸವಣ್ಣಯ್ಯ ಹಿರೇಮಠ, ಶಿವಲಿಂಗ ಶಾಸ್ತ್ರೀಮಠ, ಭದ್ರೇಶ ಕುಸ್ಲಾಲಾಪುರ, ಮಹೇಶ ಶಿರಹಟ್ಟಿ, ಸಂತೋಷ ಮೇಲಗಿರಿ, ದ್ಯಾಮಣ್ಣ ನೀಲಗುಂದ, ಪರಮೇಶ್‌ ನಾಯಕ, ಸಂತೋಷ ನಾಯಕ, ಮಂಜುನಾಥ ಮ್ಯಾಗೇರಿ, ಬಸವರಾಜ ಕೋಟಿ.

ಕಿಟ್‌ ಪ್ರೊಡಕ್ಷನ್‌ ಟೀಂ: ವಿಲ್ಸನ್‌ ಕಾಂಬ್ಳಿ, ಬಾಬು ಯಲಿಗಾರ, ಬಸವರಾಜ ಮೆಣಸಿನ ಕಾಯಿ, ರಮೇಶ ಹತ್ತಿಕಾಳ, ಅಮರೇಶ ಹಿರೇಮಠ, ಸತೀಶ ಮುದಗಲ್‌, ಶರಣಪ್ಪ ಕಮಡೊಳ್ಳಿ, ಉಮೇಶ ಹಡಪದ, ರುದ್ರಪ್ಪ, ಶಂಕ್ರಪ್ಪ ಅಣ್ಣಿಗೇರಿ, ಪರಶುರಾಮ, ದುರ್ಗಪ್ಪ, ವೆಂಕಟೇಶ ಬಳ್ಳಾರಿ, ಬದ್ರಿನಾಥ ಹಾದಿಮನಿ, ಹಾಗೂ ಜಯಶ್ರೀ ಭೈರವಾಡೆ ಸೇರಿದಂತೆ 20ಕ್ಕೂ ಹೆಚ್ಚು ತಾಯಂದಿರು ಕಿಟ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿತರಣಾ ತಂಡ: ಸಂಗಮೇಶ ದುಂದೂರು, ಈಶಣ್ಣ ಮುನವಳ್ಳಿ, ಜಗನ್ನಾಥಸಾ ಬಾಂಡ್ಗೆ, ಪ್ರೇಮನಾಥ ಬಣ್ಣದ ಹಾಗೂ ಅನಿಲ್‌ ಮೆಣಸಿನಕಾಯಿ.

ಉಸ್ತುವಾರಿ: ರಾಘವೇಂದ್ರ ಯಳವತ್ತಿ, ಅನಿಲ್‌ ಅಬ್ಬಿಗೇರಿ ಮತ್ತಿತರರು.


ಅನಿಲ್‌ ಮೆಣಸಿನಕಾಯಿ ಕೈಗೊಂಡಿರುವ ಅಭಿಯಾನದಡಿ ಕಿಟ್‌ ವಿತರಿಸುವ ವೇಳೆ ಕಂಡುಬರುವ ಸಾಮಾಜಿಕ ಅಂತರ.

ಜೋಳಿಗೆ ಜೊತೆ ಜನಜಾಗೃತಿ
ಅನಿಲ್‌ ಮೆಣಸಿನಕಾಯಿ ಅವರು ಬಡವರಿಗೆ ಧಾನ್ಯ ವಿತರಿಸುವುದರ ಜೊತೆಗೆ ಮಾರಕ ಕೋವಿಡ್ 19 ವೈರಸ್ ತಡೆಗಾಗಿ ಜನಜಾಗೃತಿ ನಡೆಸಿದ್ದಾರೆ. ಹೋದೆಲ್ಲೆಲ್ಲಾ ಜನರಿಗೆ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳಬೇಕು. ಕಾಲಕಾಲಕ್ಕೆ ಸಾಬೂನಿನಿಂದ ಕೈತೊಳೆದುಕೊಂಡು ಸುರಕ್ಷಿತವಾಗಿರಬೇಕು. ಅರಿಷಿಣ, ಲವಂಗ ಬಳಸಿದ ಕಷಾಯ ಸೇವಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಸಂದೇಶ ಸಾರುತ್ತಿದ್ದಾರೆ.

ಮನುಕುಲದ ಭಿಕ್ಷಾ ಅಭಿಯಾನಕ್ಕೆ ರೈತರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಿಕ್ಷೆ ನೀಡಿದವರಿಂದ ಸಾರ್ಥಕತೆಯ ಮಾತು ಕೇಳಿಬಂದರೆ, ಕಿಟ್‌ ಪಡೆದರು ಮಾತೃ ಹೃದಯದಿಂದ ಹರಸುತ್ತಿದ್ದಾರೆ. ಅವಳಿ ನಗರದ ಎಲ್ಲ ಜಾತಿ, ಧರ್ಮದ 15 ಸಾವಿರ ಕುಟುಂಬಗಳಿಗೆ ಕಿಟ್‌ ವಿತರಿಸಲಾಗುತ್ತಿದ್ದು, ಈಗಾಗಲೇ ಶೇ.90 ರಷ್ಟು ಪೂರ್ಣಗೊಂಡಿದೆ. ಈ ಅಭಿಯಾನ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ತೃಪ್ತಿ ನನಗಿದೆ.


ಗದುಗಿನ ಎಪಿಎಂಸಿ ಹಿಂಭಾಗದ ಹುಮನಾಬಾದಿ ಅವರ ವಕಾರದಲ್ಲಿ ಕಿಟ್‌ ಸಿದ್ಧಪಡಿಸುತ್ತಿರುವುದು.


– ಅನಿಲ್‌ ಮೆಣಸಿನಕಾಯಿ, ಬಿಜೆಪಿ ಮುಖಂಡ

ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸಲು ಅನಿಲ್‌ ಮೆಣಸಿನಕಾಯಿ ಜೋಳಿಗೆ ಹಾಕಿರುವುದು ಅವರಲ್ಲಿನ ಜನಪರ ಕಾಳಜಿಗೆ ಹಿಡಿದ ಕನ್ನಡಿ. ಅವರ ಸೇವೆ ನಮಗೆಲ್ಲರಿಗೂ ಖುಷಿ ತಂದಿದೆ. ಹೀಗಾಗಿ ನಾವೇ ಕರೆದು ಜೋಳಿಗೆಗೆ ಧಾನ್ಯ ನೀಡಿದ್ದೇವೆ. ಇದು ಎಲ್ಲರಿಗೂ ಮಾದರಿ.
– ಕಲ್ಲಯ್ಯಜ್ಜನವರು, ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ

ಕ್ಷೇತ್ರದ ಜನತೆಗಾಗಿ ಯುವ ನಾಯಕ ಅನಿಲ್‌ ಮೆಣಸಿನಕಾಯಿ ಅವರು ಮಾನವಿಯತೆಗಾಗಿ ಭಿಕ್ಷಾ ಅಭಿಯಾನ ಕೈಗೊಂಡು, ಸಾವಿರಾರು ಕುಟುಂಬಗಳಿಗೆ ಆಹಾರ ಸಾಮಗ್ರಿ ಒದಗಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಸರಕಾರದ ಪರವಾಗಿ ಸಚಿವನಾಗಿ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ.
– ಸಿ.ಸಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು

ಯುವಕರ ಕಣ್ಮಣಿ ಅನಿಲ್‌ ಮೆಣಸಿನಕಾಯಿ ಅವರು ರಾಜಕಾರಣಕ್ಕೆ ಸೀಮಿತವಾಗದೇ, ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರ ಬವಣೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ.
– ಶಿವಕುಮಾರ ಉದಾಸಿ, ಸಂಸದರು

ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದೆ, ಒಪ್ಪತ್ತಿನ ಊಟಕ್ಕೂ ಸಮಸ್ಯೆಯಾಗಿತ್ತು. ಜನ್ಮ ನೀಡಿದ ತಂದೆಯಂತೆ ಕರೆದು ಕಿಟ್‌ ನೀಡಿದ್ದಾರೆ. ಅನಿಲ್‌ ಮೆಣಸಿನಕಾಯಿ ಹೊಟ್ಟೆ ತಣ್ಣಗಿರಲಿ.
– ಗಂಗವ್ವ ನಾಗನೂರ, ವಕೀಲ ಚಾಳ ನಿವಾಸಿ

ಒಂದುವರೆ ತಿಂಗಳಿಂದ ಕೂಲಿ, ನಾಲಿ ಇಲ್ದ, ಮನೆ ಮಂದಿಯಲ್ಲಾ ಕುಂತು ತಿನ್ನಾಕುಂತೀವಿ. ಇದ್ದುದ್ದೆಲ್ಲಾ ಖಾಲಿ ಆಗೈತಿ. ಅನಿಲ್‌ ಅಣ್ಣಾವ್ರು ಕೊಟ್ಟ ಕಿಟ್‌ ನಿಂದ 15 ದಿನ ಚಿಂತಿ ಇಲ್ಲ. ಕಿಟ್‌ ನಿಂದ ಅನುಕೂಲ ಆಗೈತಿ.
– ಲಲಿತಾ ಮಿಸಾಳ, ಫಲಾನುಭವಿ


Advertisement

Udayavani is now on Telegram. Click here to join our channel and stay updated with the latest news.

Next