ತಸ್ಗಾಂವ್ (ಮಹಾರಾಷ್ಟ್ರ): ಒಂದೇ ದೇಶದಲ್ಲಿ ಇಬ್ಬಿಬ್ಬರು ಪ್ರಧಾನಮಂತ್ರಿಗಳಿರುವುದಕ್ಕೆ ಭಾರತೀಯ ಜನತಾ ಪಕ್ಷವು ಯಾವತ್ತಿಗೂ ಅವಕಾಶ ನೀಡುವುದಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಅಮಿತ್ ಶಾ ಮಹಾರಾಷ್ಟ್ರಾದ ಸಾಂಗ್ಲಿ ಜಿಲ್ಲೆಯ ತಸ್ಗಾಂವ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಮತ್ತು ಜಮ್ಮು ಕಾಶ್ಮೀರ ಮಾಜೀ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಇರಬೇಕು ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಉದ್ಧರಿಸಿ ಅಮಿತ್ ಶಾ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಭಾರತೀಯ ಜನತಾ ಪಕ್ಷ ಅಸ್ತಿತ್ವದಲ್ಲಿ ಇರುವವರೆಗೆ ಕಾಶ್ಮೀರವು ಭಾರತದ ಭೂಭಾಗವಾಗಿಯೇ ಇರಲಿದೆ. ಕಾಶ್ಮೀರವನ್ನು ನಮ್ಮಿಂದ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷವು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದೆ, ಆದರೆ ನಾವದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಕಾಶ್ಮೀರ ತನಗೆ ಪ್ರತ್ಯೇಕ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ಹುದ್ದೆ ಬೇಕೆಂದು ಚೌಕಾಶಿ ನಡೆಸುತ್ತಿದ್ದು ಮುಂಬರುವ ದಿನಗಳಲ್ಲಿ ಅದು ಸಾಕಾರಗೊಳ್ಳುವ ವಿಶ್ವಾಸವಿದೆ ಎಂದು ಒಮರ್ ಅಬ್ದುಲ್ಲಾ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ತಮ್ಮ ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಸಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು ಮತ್ತು ಈ ಕುರಿತಾಗಿ ತಮ್ಮ ಮಿತ್ರ ಪಕ್ಷದ ಮುಖಂಡರ ಹೇಳಿಕೆಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಮೋದಿ ಆಗ್ರಹಿಸಿದ್ದರು.