ನ್ಯೂಯಾರ್ಕ್: ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ತಡೆಯುವ ಅಮೆರಿಕದ ಕಾರ್ಯತಂತ್ರದ ದೃಷ್ಟಿಯಿಂದ ನೋಡಿದರೆ ಜಗತ್ತಿನಲ್ಲೇ ಬಿಜೆಪಿಯು ಅತ್ಯಂತ ಮಹತ್ವದ ವಿದೇಶಿ ರಾಜಕೀಯ ಪಕ್ಷವಾಗಿದೆ.
ಹೀಗೆಂದು ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ಪ್ರಮುಖ ಶಿಕ್ಷಣ ತಜ್ಞ ವಾಲ್ಟರ್ ರಸೆಲ್ ಮೀಡ್ ಎಂಬುವರು ಈ ಲೇಖನ ಬರೆದಿದ್ದಾರೆ. “ಇಸ್ರೇಲ್‌ನ ಲೈಕುಡ್ ಪಾರ್ಟಿ, ಚೀನಾದ ಕಮ್ಯೂನಿಸ್ಟ್ ಪಾರ್ಟಿ ಮತ್ತು ಈಜಿಪ್ಟ್ನ ಮುಸ್ಲಿಂ ಬ್ರದರ್‌ಹುಡ್ ಎನ್ನುವುದು ವಿಶ್ವದ ಮೂರು ಪ್ರಮುಖ ರಾಜಕೀಯ ಪಕ್ಷಗಳಾಗಿವೆ. ಈ ಮೂರೂ ಪಕ್ಷಗಳ ಗಮನಾರ್ಹ ತತ್ವಗಳನ್ನು ಬಿಜೆಪಿ ಹೊಂದಿದೆ. ಭಾರತೀಯರಲ್ಲದವರಿಗೆ ಅಪರಿಚಿತವಾದ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸದಿಂದ ಅದು ಬೆಳೆಯುತ್ತಿರುವುದರಿಂದ ಬಿಜೆಪಿ ಬಗ್ಗೆ ಪಾಶ್ಚಿಮಾತ್ಯರಿಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ರಸೆಲ್ ಮೀಡ್ ಬರೆದಿದ್ದಾರೆ.
ಮುಸ್ಲಿಂ ಬ್ರದರ್‌ಹುಡ್ ಮಾದರಿಯಲ್ಲೇ ಬಿಜೆಪಿ ಕೂಡ ಆಧುನಿಕತೆಯ ಪ್ರಮುಖ ಅಂಶಗಳನ್ನು ಅಪ್ಪಿಕೊಂಡರೂ, ಪಾಶ್ಚಿಮಾತ್ಯ ಉದಾರೀಕರಣದ ಹಲವಾರು ಆದರ್ಶಗಳು ಮತ್ತು ಆದ್ಯತೆಗಳನ್ನು ತಿರಸ್ಕರಿಸುತ್ತದೆ. ಚೀನಾದ ಕಮ್ಯೂನಿಸ್ಟ್ ಪಾರ್ಟಿಯಂತೆಯೇ ಬಿಜೆಪಿ, ಶತಕೋಟಿಗೂ ಅಧಿಕ ಜನಸಂಖ್ಯೆಯಿರುವ ದೇಶವನ್ನು ಮುನ್ನಡೆಸುವ ಮೂಲಕ ಜಾಗತಿಕ ಸೂಪರ್‌ಪವರ್ ಆಗಿ ಹೊರಹೊಮ್ಮುತ್ತಿದೆ ಎಂದೂ ಅಭಿಪ್ರಾಯಪಡಲಾಗಿದೆ.
ಭಾರತವು ಮುಂಚೂಣಿಯಲ್ಲಿರುವ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವಂಥ ಸಂದರ್ಭದಲ್ಲೇ ಬಿಜೆಪಿಯು ಸತತ 2 ಬಾರಿ ಅಧಿಕಾರಕ್ಕೇರಿದೆ. 3ನೇ ಬಾರಿಯೂ ಅಧಿಕಾರಕ್ಕೇರುವ ಸಾಧ್ಯತೆಯಿದೆ. ಹೀಗಾಗಿ ಅಮೆರಿಕವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಸಾಧಿಸುವ ಅಗತ್ಯವಿದೆ ಎಂದೂ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.