ಹೊಳಲ್ಕೆರೆ: ಮುಂದಿನ ಮೂರು ವರ್ಷಗಳ ರಾಜ್ಯ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಆಡಳಿತ ನಡೆಸುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಿಂದ ಗಣಪತಿ ವೃತ್ತದವರೆಗೆ ಕಾರ್ಯಕರ್ತರ ರ್ಯಾಲಿ ನಡೆಸಿದ ಅವರು ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಆಭ್ಯರ್ಥಿ ಚಿದಾನಂದ ಎಂ.ಗೌಡ ಪರ ಮತ ಯಾಚಿಸಿ ಅವರು ಮಾತನಾಡಿದರು. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರವಾಗಿದ್ದಾರೆ. ವಿದ್ಯಾವಂತರು ಬಿಜೆಪಿ ಪಕ್ಷವನ್ನು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಅ. 28 ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡುವ ಮೂಲಕ ಗೆಲುವನ್ನು ಖಚಿತಗೊಳಿಸಬೇಕೆಂದರು. ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯ ಎರಡು ಕ್ಷೇತ್ರಗಳಲ್ಲು ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಧೂಳಿಪಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮತದಾರರು ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಚುನಾವಣೆಗೆ ಕಾಯುತ್ತಿದ್ದಾರೆ ಎಂದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಜನರು ಯಾವತ್ತು ಬಿಎಸ್‌ವೈ ಪರವಾಗಿ ನಿಂತಿದ್ದಾರೆ. ಅದೇ ರೀತಿ ಶಾಸಕ ಎಂ. ಚಂದ್ರಪ್ಪ ಅವರು ಯಡಿಯೂರಪ್ಪನವರ ಬಲಗೈ ಬಂಟರಾಗಿದ್ದಾರೆ. ಕಷ್ಟ ಕಾಲದಲ್ಲಿ ಬಿಎಸ್‌ವೈ ಜತೆಗೆ ಇದ್ದವರು. ಹಾಗಾಗಿ ಚಂದ್ರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಮಂತ್ರಿಯಾಗುವ ಅವಕಾಶ ನೀಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಈ ನಾಡಿನ ಭವಿಷ್ಯದ ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆಯನ್ನು ಬಿ.ವೈ. ವಿಜಯೇಂದ್ರ ಹೊಂದಿದ್ದಾರೆ. ನಾಡು ಕಂಡ ಅಪರೂಪದ ನಾಯಕ ಬಿಎಸ್‌ವೈ ಹಾದಿಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
ಬಿಜೆಪಿ ಮುಖಂಡ ಸಿ. ರಘುಚಂದನ್, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ಸಿದ್ದೇಶ್, ಜಿಪಂ ಸದಸ್ಯರಾದ ಸುಮಾ ಲಿಂಗರಾಜ್, ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಜಿಪಂ ಮಾಜಿಅಧ್ಯಕ್ಷ ಎಲ್.ಬಿ. ರಾಜಶೇಖರ್, ಪಪಂ ಸದಸ್ಯರಾದ ಕೆ.ಸಿ. ರಮೇಶ್, ಪಿ.ಆರ್.ಮಲ್ಲಿಕಾರ್ಜುನ್, ಡಿ.ಎಸ್. ವಿಜಯ್,ಎಚ್.ಆರ್. ನಾಗರತ್ನ ವೇದಮೂರ್ತಿ, ಪಿ.ಎಚ್. ಮುರುಗೇಶ್, ಇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ರೂಪಾ ಸುರೇಶ್, ಜಗದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸರಸ್ವತಿ, ಡಿ.ಸಿ. ಮೋಹನ್, ಬಸವರಾಜ್ ಯಾದವ್ ಇದ್ದರು.
ಸೋಲಿನ ಭಿತಿಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಮತ ಎಣಿಕೆ ಪ್ರಾರಂಭವಾದ ಒಂದೆರಡು ಗಂಟೆಯಲ್ಲಿಬಿಜೆಪಿ ಲೀಡ್ ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಜಾಗ ಖಾಲಿ ಮಾಡುವ ಸ್ಥಿತಿ ಇದೆ.
–ಬಿ.ವೈ.ವಿಜಯೇಂದ್ರ,ಬಿಜೆಪಿ ರಾಜ್ಯ ಉಪಾಧ್ಯಕ್ಷ