ಹರಪನಹಳ್ಳಿ: ಲೋಕಸಭಾ ಚುನಾವಣಾ ಫಲಿತಾಂಶ ಧರ್ಮಕ್ಕೆ ಸಿಕ್ಕ ಜಯ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪುರಸಭೆ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಅವರು ಮಾತನಾಡಿದರು.
ಗೆಲುವಿನೊಂದಿಗೆ ನರೇಂದ್ರ ಮೋದಿ ಒಬ್ಬ ನೈಜ ಚೌಕಿದಾರ್ ಎಂಬುವುದನ್ನು ದೇಶದ ಜನತೆ ಸಾಬೀತುಪಡಿಸಿದ್ದಾರೆ. ಇದರೊಂದಿಗೆ ಮೋದಿಯವರು ಒಬ್ಬ ರಾಜಕಾರಣಿಯಲ್ಲ, ಅವರೊಬ್ಬ ಧರ್ಮ ರಕ್ಷಣೆಗಾಗಿ ಅವತಾರವೆತ್ತಿರುವ ಒಬ್ಬ ಸಂತ. ಒಬ್ಬ ರಾಜಕೀಯ ಸಂತನನ್ನು ಕ್ಷಣ ಕ್ಷಣಕ್ಕೆ ಅವಮಾನಿಸುತ್ತ ಬಂದ ಕಾಂಗ್ರೆಸ್ ಸ್ಥಿತಿಯನ್ನು ಜಗತ್ತೆ ನೋಡಿ ನಗುವಂತಾಗಿದೆ ಎಂದರು. ಮಹಾಘಟಬಂಧನ ಮಹಾ ಮೈತ್ರಿ ಎಂಬೆಲ್ಲ ಸೋಗು ಹಾಕಿ ಮೆರೆಯುತ್ತಿದ್ದ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹೇಳ ಹೆಸರಿಲ್ಲದಂತೆ ನೆಲಕಚ್ಚಿರುವುದು ನಿಜಕ್ಕೂ ಧರ್ಮಕ್ಕೆ ಸಂದ ಜಯವಾಗಿದೆ. ಇದು ನೂರಾರು ಕೋಟಿ ಭಾರತೀಯ ಗೆಲುವು ಅಸಂಖ್ಯಾತ ಕಾರ್ಯಕರ್ತರ ಶ್ರಮ ಈ ಗೆಲುವಿನಲ್ಲಿ ಅಡಗಿದೆ. ಪುರಸಭೆ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಮತ ನೀಡಬೇಕು. ಈ ಮೂಲಕ ಪುರಸಭೆ ಚುಕ್ಕಾಣಿ ಹಿಡಿಯಲು ಅಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಕಲಾಮನೆ ಭೀಮಪ್ಪ, ಶಂಕ್ರನಹಳ್ಳಿ ಹನುಮಂತಪ್ಪ, ಮತ್ತಿಹಳ್ಳಿ ಶಿವಣ್ಣ, ಅಭ್ಯರ್ಥಿ ತರಕಾರಿ ವೀರಣ್ಣ ಮತ್ತಿತರರಿದ್ದರು.