ಅಫಜಲಪುರ: ಬಿಜೆಪಿ ದೇಶದ ಬಹುತೇಕ ರಾಜ್ಯಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಈಗ ಕರ್ನಾಟಕ ವಿಧಾನಸಭೆ ಚುನಾವಣೆ ಬಂದಿದ್ದು, ಇಲ್ಲಿಯೂ ಬಿಜೆಪಿ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ತಾಲೂಕಿನ ದೇವಲ ಗಾಣಗಾಪುರದ ಪ್ರಸಿದ್ಧ ಯಾತ್ರಾ ಸ್ಥಳವಾದ ದತ್ತಾತ್ರೇಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿ ಬಳಿಕ ಅಫಜಲಪುರ ಮಂಡಲದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಫಜಲಪುರ ಕ್ಷೇತ್ರ ವೈಶಿಷ್ಟ್ಯತೆಯಿಂದ ಕೂಡಿದೆ. ಇಲ್ಲಿ ಬಿಜೆಪಿ ಸಂಘಟನೆ ಬಹಳ ಉತ್ತಮ ರೀತಿಯಲ್ಲಿ ಆಗಿದೆ. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಬೇಕೆಂದು ತಿಳಿಸಲಿದ್ದಾರೆ. ಟಿಕೆಟ್ ಅಂತಿಮಗೊಂಡ ಬಳಿಕ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರ ಕೈಗೊಳ್ಳಿ ಎಂದು ಹೇಳಿದರು.
ಅಫಜಲಪುರ ಮಂಡಲ ಅಧ್ಯಕ್ಷ ಸೂರ್ಯಕಾಂತ ನಾಕೇದಾರ ಮಾತನಾಡಿ, ತಾಲೂಕಿನಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗಿದೆ. ಕಾರ್ಯಕರ್ತರು ಯಾರೇ ಅಭ್ಯರ್ಥಿಯಾದರೂ ಪ್ರಾಮಾಣಿಕವಾಗಿ ಬೆಂಬಲಿಸಲಿದ್ದಾರೆ. ಈ ಬಾರಿ ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ದ ಎಂದರು.
ಮುಖಂಡರಾದ ಅಶೋಕ ಬಗಲಿ, ಮಲ್ಲಿಕಾರ್ಜುನ ನಿಂಗದಳ್ಳಿ, ರಾಘವೇಂದ್ರ ಕುಲಕರ್ಣಿ, ಸುಧಾಕರ ಕುಲಕರ್ಣಿ ಕೋಗನೂರ, ನಾಗೇಶ ಮೊಹರೀರ್, ರಾಜೇಶ ನಾಕೇದಾರ, ಅರ್ಚಕರಾದ ಪ್ರಖ್ಯಾತ ಪೂಜಾರಿ, ಯೋಗೇಶ ಪೂಜಾರಿ ಇದ್ದರು.
ದ್ವಾರಕನಾಥ ಕುಟುಂಬ ಪೂಜೆ ಸಲ್ಲಿಕೆ: ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ರಾಜಗುರು ದ್ವಾರಕನಾಥ ಅವರು
ಕುಟುಂಬ ಸಹಿತ ನಿತ್ಯ ನಡೆಯುತ್ತಿರುವ ವಿಶೇಷ ಪಾರಾಯಣದಲ್ಲಿ ಕಳೆದ ಒಂದು ವಾರದಿಂದ ಪಾಲ್ಗೊಳ್ಳುತ್ತಿದ್ದಾರೆ.