Advertisement

ಉಡುಪಿ-ಚಿಕ್ಕಮಗಳೂರು  ಕ್ಷೇತ್ರಕ್ಕೆ ಬಿಜೆಪಿ ರಾಮಬಾಣ?

01:00 AM Mar 01, 2019 | Team Udayavani |

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ. 9 ರಂದು ನಡೆಯಲಿರುವ ಐದು ಜಿಲ್ಲೆಗಳ ಬಿಜೆಪಿ ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಈ ಸಂದರ್ಭ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತ ಗೊಂದಲವೂ ಇತ್ಯರ್ಥಗೊಳ್ಳುವ ಸಂಭವವಿದೆ.

Advertisement

ಸಮಾವೇಶವನ್ನು ದ.ಕ. ಬಿಜೆಪಿ ಆಯೋಜಿಸಲಿದ್ದು, ಸ್ಥಳ ನಿಗದಿಯಾಗಬೇಕಿದೆ. ಇದರಲ್ಲಿ ಉಡುಪಿ, ದ.ಕ., ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಶಕ್ತಿ ಕೇಂದ್ರಗಳ ನಾಯಕರು ಪಾಲ್ಗೊಳ್ಳುವರು. ಜತೆಗೆ ಚಿಂತಕರ ಸಭೆಯೂ ನಡೆಯಲಿದೆ. ಇದರಲ್ಲೇ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಮೇದುವಾರಿಕೆಗೆ ಬಿಜೆಪಿ ವರಿಷ್ಠರು ರಾಮ ಬಾಣ ಬಿಡುವ ಸಾಧ್ಯತೆ ಇದೆ.

ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪಕ್ಷದ ಕೆಲವು ಕಾರ್ಯಕರ್ತರು “ಗೋ ಬ್ಯಾಕ್‌’ ಎಂದು ಟ್ವೀಟಿಸಿರುವುದು, ಇದಕ್ಕೆ ಪ್ರತಿಯಾಗಿ ಶೋಭಾ ಇದಕ್ಕೆಲ್ಲ ಹೆದರೆ ಎಂದು ಪ್ರತಿಕ್ರಿಯಿಸಿರುವುದು ಪಕ್ಷದ ನಾಯಕತ್ವಕ್ಕೆ ಮುಜುಗುರ ಉಂಟು ಮಾಡಿದೆ. ಶೋಭಾರನ್ನು ಮತ್ತೆ ಕಣಕ್ಕಿಳಿಸಿದರೆ ಗೆಲುವಿನ ಸಾಧ್ಯತೆ ಇದೆಯೇ ಎಂದು ಪಕ್ಷ ಯೋಚಿಸುತ್ತಿದೆ. ಏತನ್ಮಧ್ಯೆ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆಯವರ ಪರವಾಗಿ ಕಾರ್ಯಕರ್ತರು ಟ್ವೀಟ್‌ ಮಾಡಿದ್ದಾರೆ. ಇವರನ್ನು ಗಮನದಲ್ಲಿರಿಸಿಕೊಂಡೇ ಶೋಭಾ, ಗಂಡಸು ಸಂಸದರು ಏನು ಮಾಡಿದ್ದರು
ಎಂದು ಗುಡುಗಿದ್ದರು ಎಂದು ಹೇಳಲಾಗುತ್ತಿದೆ. ಹಿಂದೆ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಂಸದ ಡಿ.ವಿ. ಸದಾನಂದ ಗೌಡರೂ ಮತ್ತೆ ಕ್ಷೇತ್ರದತ್ತ ಕಣ್ಣು ನೆಟ್ಟಿದ್ದಾರೆ. ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ನಳಿನ್‌ ಕುಮಾರ್‌ ಕಟೀಲ್‌ ಬಂಟರೆಂದು ಗುರುತಿಸಿಕೊಳ್ಳದೇ ಇದ್ದರೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ಕೊಡಲು ಜಾತಿ ಲೆಕ್ಕಾಚಾರ ತಡೆಯಾಗುತ್ತಿದೆ. ಇಂಥ ಅನಿವಾರ್ಯ ಸಂದರ್ಭ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿಯಿಂದ ಕಣಕ್ಕಿಳಿಸುವ ಚಿಂತನೆಯೂ ಚಾಲ್ತಿಯಲ್ಲಿದೆ. ಹೀಗಾದರೆ ಹೆಗ್ಡೆಯವರಿಗೆ ವಿಧಾನ ಪರಿಷತ್‌ ಸ್ಥಾನ ಕಲ್ಪಿಸಲೂಬಹುದು. ಲೋಕಸಭಾ ಚುನಾವಣೆ ಬಳಿಕ ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲೂ ಹೆಗ್ಡೆಯವರ ಹೆಸರೂ ಈಗಾಗಲೇ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಯಶಪಾಲ್‌ ಸುವರ್ಣ, ವಿಲಾಸ ನಾಯಕ್‌, ಶಿರಿಯಾರ ಗಣೇಶ ನಾಯಕ್‌ ಸಹ ಆಸಕ್ತಿ ತೋರಿದ್ದಾರೆ.

ಉಡುಪಿ ಕ್ಷೇತ್ರಕ್ಕೆ ಮಹಿಳಾ ಕೋಟಾವನ್ನೇ ಮುಂದುವರಿಸಬೇಕಾದರೆ ಕರ್ನಾಟಕದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವೆಯೊಬ್ಬರನ್ನು ಕರೆ ತಂದರೆ ಹೇಗೆ ಎಂಬ ಚಿಂತನೆಯೂ ಪಕ್ಷದಲ್ಲಿದೆ ಎನ್ನಲಾಗುತ್ತಿದೆ.

ಮತ್ತೆಲ್ಲಿ  ಸ್ಥಾನ?
ಶೋಭಾರಿಗೆ ಉಡುಪಿಯಲ್ಲಿ ಇಲ್ಲವಾದರೆ ಮತ್ತೆಲ್ಲಿ ಸ್ಥಾನ ಕೊಡುವುದೆಂಬ ಪ್ರಶ್ನೆಯೂ ಪಕ್ಷದ್ದು. ಹಿಂದೆ ಮೈಸೂರು ಜಿಲ್ಲಾ ಸಚಿವರಾಗಿದ್ದ ಅವರಿಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ನಿಲ್ಲಿಸಬಹುದೇ ಅಥವಾ ಡಿ.ವಿ. ಸದಾನಂದ ಗೌಡರು ಪ್ರತಿನಿಧಿಸುವ ಬೆಂಗಳೂರು ಉತ್ತರಕ್ಕೆ ಕಳುಹಿಸುವುದೇ ಎಂಬ ಚಿಂತನೆ ನಡೆದಿದೆ. ಈ ಕ್ಷೇತ್ರಗಳಲ್ಲಿನ ಹಾಲಿ ಸಂಸದರಿಗೆ ಸ್ಥಾನ ಎಲ್ಲಿ ಕಲ್ಪಿಸಬೇಕೋ ಬೇಡವೋ ಎಂಬ ಗೊಂದಲವೂ ಪಕ್ಷದ್ದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next