Advertisement

ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು : ಸಿದ್ದೇಶ್ವರ

07:33 PM Mar 15, 2021 | Team Udayavani |

ದಾವಣಗೆರೆ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಒಳಗೊಂಡಂತೆ ಎಲ್ಲ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಯುವ ಮೋರ್ಚಾದಿಂದ ಏರ್ಪಡಿಸಿದ್ದ ಯುವ ಸಮಾವೇಶ ಮತ್ತು ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ತುಂಬು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಅಧಿ  ಕಾರದಲ್ಲಿದೆ. ದಾವಣಗೆರೆ ದಕ್ಷಿಣದಲ್ಲಿ ಈವರೆಗೆ ಅ ಧಿಕಾರ ಹಿಡಿಯಲು ಆಗಿಲ್ಲ. ಮುಸ್ಲಿಂ ಮತಗಳು ಹೆಚ್ಚಾಗಿರುವ ಕಾರಣ ಮತಗಳು ಬಿಜೆಪಿಗೆ ಬೀಳುವುದಿಲ್ಲ ಎನ್ನಲಾಗುತ್ತದೆ. ದಕ್ಷಿಣ ಕ್ಷೇತ್ರದಲ್ಲಿ ರಸ್ತೆಗಳು ಆಗಿರುವುದು ಬಿಟ್ಟರೆ ಬೇರೆ ಏನು ಕೆಲಸ ಆಗಿಲ್ಲ. ಹಲವರಿಗೆ ಹಕ್ಕುಪತ್ರ, ಮನೆ, ಬಿಪಿಎಲ್‌ ಕಾರ್ಡ್‌ ದೊರೆತಿಲ್ಲ. ಯುವ ಮೋರ್ಚಾ ಕಾರ್ಯಕರ್ತರು ಜನರ ಮನಸ್ಸು ಗೆಲ್ಲಬೇಕು. ಸರ್ಕಾರದಿಂದ ನೀಡಲಾಗುವ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲುವುದು ಸಾಧ್ಯವಾಗುತ್ತದೆ. ಒಡಕು ಉಂಟಾದಲ್ಲಿ ಗೆಲುವು ಸಾಧ್ಯ ಇಲ್ಲ ಎಂದು ತಿಳಿದು ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು. ಮಹಾನಗರ ಪಾಲಿಕೆಯ 20, 22ನೇ ವಾರ್ಡ್ ಗಳಲ್ಲಿ ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಸಹ ಕೆಲಸ ಮಾಡಬೇಕು. ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲಲು ಶ್ರಮಿಸಬೇಕು. ಪಕ್ಷಕ್ಕೆ ದ್ರೋಹ ಮಾಡದೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ಬಿಜೆಪಿಯಲ್ಲಿನ ಯುವ ಶಕ್ತಿ ಪಕ್ಷಕ್ಕೆ ಆಧಾರ. ಅಧಿಕಾರದ ಜತೆ ಪಕ್ಷದ ಸಂಘಟನೆ ನಮ್ಮ ಮೂಲ ಗುರಿ ಆದಾಗ ಪಕ್ಷ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. ಪಕ್ಷ ಸದೃಢವಾಗಿ ಬೆಳೆದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ನಮ್ಮ ಪಕ್ಷ ಗಾಳಿಯಲ್ಲಿ ತೂರಿ ಬಂದಂತಹ ಪಕ್ಷ ಅಲ್ಲ. ಬಿಜೆಪಿಗೆ ತನ್ನದೇ ಇತಿಹಾಸವಿದೆ. 1988ರಲ್ಲಿ ಬಿಜೆಪಿ ಯಾವ ಸ್ಥಾನಗಳಿಸಿರಲಿಲ್ಲ. 1990ರಲ್ಲಿ ಎಲ್‌.ಕೆ.ಅಡ್ವಾಣಿ ಆರಂಭಿಸಿದ್ದ ರಾಮಯಾತ್ರೆ ದಾವಣಗೆರೆಗೆ ಬಂದಾಗ ವೆಂಕಟೇಶ್ವರ ವೃತ್ತದಲ್ಲಿ ನಡೆದ ಗಲಾಟೆಯಲ್ಲಿ 8 ಯುವಕರು ಬಲಿಯಾದರು. 72 ಜನ ಗಾಯಗೊಂಡಿದ್ದರು. ಎಲ್ಲದರ ಪರಿಣಾಮ ಜಿ. ಮಲ್ಲಿಕಾರ್ಜುನಪ್ಪ ಸಂಸದರಾಗಿ ಆಯ್ಕೆಯಾದರು. ಯುವಕರ ಶಕ್ತಿ, ಬಲದಿಂದ ಎಲ್ಲವೂ ಸಾಧ್ಯವಾಯಿತು ಎಂದು ಸ್ಮರಿಸಿದರು. ಮಹಾನಗರ  ಪಾಲಿಕೆಯ 20, 22ನೇ ವಾರ್ಡ್ ಗಳಲ್ಲಿ ಉಪಚುನಾವಣೆ ಅಭ್ಯರ್ಥಿಗಳು ಯಾರು ಎಂಬುದು ಕೋರ್‌ ಕಮಿಟಿಯಲ್ಲಿ ಎರಡು ದಿನಗಳಲ್ಲಿ ಪ್ರಕಟಗೊಳ್ಳಲಿದೆ. 19 ರಿಂದ ಪ್ರಚಾರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ನಗರಪಾಲಿಕೆ ಸದಸ್ಯರಾದ ರಾಕೇಶ್‌ ಜಾಧವ್‌, ಎಲ್‌.ಡಿ. ಗೋಣೆಪ್ಪ, ಸೋಗಿ ಶಾಂತಕುಮಾರ್‌, ಮಾಜಿ ಸದಸ್ಯ ದೇವರಮನೆ ಶಿವಕುಮಾರ್‌, ಶ್ರೀನಿವಾಸ ದಾಸಕರಿಯಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌.ಎಲ್‌. ಶಿವಪ್ರಕಾಶ್‌, ಮಂಜುನಾಥ್‌ ಚಳ್ಳಕೆರೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next