ಕೋಲ್ಕತ: ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಕ್ಷೇತ್ರವಾದ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ್‌ನಲ್ಲಿ ಭಾನುವಾರ ನಡೆದ ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
ಈ ಹಿಂದೆ ಟಿಎಂಸಿ ನಡೆಸುತ್ತಿದ್ದ ಭೆಕುಟಿಯಾ ಸಮಬಾಯ್ ಕೃಷಿ ಸಮಿತಿಯ 12 ಸ್ಥಾನಗಳಲ್ಲಿ ಕೇಸರಿ ಪಕ್ಷ 11 ಸ್ಥಾನಗಳನ್ನು ಗೆದ್ದಿದೆ.ಕೇವಲ ಒಂದು ಸ್ಥಾನವನ್ನು ಟಿಎಂಸಿ ಗೆದ್ದಿದೆ.
ಸಹಕಾರಿ ಸಂಸ್ಥೆಗೆ ಭಾನುವಾರ ಚುನಾವಣೆ ನಡೆದಿದ್ದು, ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಎಂಸಿ ಮತದಾನಕ್ಕೆ ಅಡ್ಡಿಪಡಿಸಲು ಹೊರಗಿನವರನ್ನು ಕರೆತರಲು ಪ್ರಯತ್ನಿಸಿದೆ ಆದರೆ ಸಾಮಾನ್ಯ ಮತದಾರರು ಅವರ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಆರೋಪಿಸಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಟಿಎಂಸಿಗೆ ಸೇರಿದ ಸ್ಥಳೀಯ ಪಂಚಾಯತ್ ಸಮಿತಿಯ ಸದಸ್ಯರೊಬ್ಬರು ಟಿವಿ ಸುದ್ದಿ ವಾಹಿನಿಗಳಲ್ಲಿ ಕೆಲವು ಮಹಿಳೆಯರು ತಮ್ಮ ಅಂಗಿಯನ್ನು ಹರಿದು ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಿರುವುದು ಕಂಡುಬಂದಿದೆ.ನಂದಿಗ್ರಾಮ ಪೊಲೀಸ್ ಠಾಣೆಯ ಸಿಬಂದಿ ಆತನನ್ನು ರಕ್ಷಿಸಿದ್ದಾರೆ.
ಟಿಎಂಸಿ ವಕ್ತಾರರನ್ನು ಸಂಪರ್ಕಿಸಿದಾಗ ಸಹಕಾರಿ ಚುನಾವಣೆ ಅಥವಾ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. 2021ರ ರಾಜ್ಯ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುವೇಂದು ಅಧಿಕಾರಿ ಸೋಲಿಸಿದ್ದರು.