Advertisement

ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು: ಶ್ರೀನಿವಾಸ ಪ್ರಸಾದ್‌

09:15 PM May 11, 2019 | Lakshmi GovindaRaj |

ಎಚ್‌.ಡಿ.ಕೋಟೆ: ಇದೇ ಮೊದಲ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು, ಮಾಧ್ಯಮ ಹಾಗೂ ಸಾರ್ವತ್ರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿದೆ. ಪಕ್ಷ ಸಂಘಟನೆಗೆ ಈ ಚುನಾವಣೆ ನಾಂದಿಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀ ನಿವಾಸಪ್ರಸಾದ್‌ ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ನನಗೆ ಇದು 14ನೇ ಚುನಾವಣೆ, ಈ ಪೈಕಿ 9 ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದೇನೆ. ಸುದೀರ್ಘ‌ 40 ವರ್ಷದ ರಾಜಕೀಯ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ.

ಹೀಗಾಗಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ದೋಸ್ತಿ ಅಭ್ಯರ್ಥಿ ಎದುರಿಸಲು ಸಕಲ ತಯಾರಿ ಮಾಡಿಕೊಂಡು ಬಹಳ ವ್ಯವಸ್ಥಿತವಾಗಿ ನನ್ನ ಅನುಭವದ ಮೇಲೆ ಚುನಾವಣೆ ನಡೆಸಿದ್ದೇನೆ. ನಾನು ಹೆಚ್ಚಿನ ಮತದ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

20ಕ್ಕೂ ಹೆಚ್ಚು ಸ್ಥಾನ: ಈಗ ಚುನಾವಣೆ ಮುಗಿದಿದೆ ಗೊಂದಲಬೇಡ. ಮುಖಂಡರ ಜೊತೆ ಕೂತು ಸೌಹರ್ದವಾಗಿ ಚರ್ಚೆ ಮಾಡಿ. ಪಕ್ಷದ ಸಂಘಟನೆಯಲ್ಲಿ ವಿಶ್ವಾಸದಿಂದ ತೊಡಗಿದರೆ ಪಕ್ಷ ಬೆಳೆಯುತ್ತದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಈ ಬಾರಿ ಪಕ್ಷಕ್ಕೆ ಹೆಚ್ಚಿನ ಮತ ಬಂದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಸರ್ಕಾರ ಇದ್ದರೂ ಬಿಜೆಪಿ ಪಕ್ಷಕ್ಕೆ 17 ಸ್ಥಾನ ಬಂದಿತ್ತಿ. ಈ ಬಾರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರಿಗೂ ತಲೆಬಾಗಿಲ್ಲ: ನಾನು 9 ಲೋಕಸಭೆ ಸೇರಿ 14 ಚುನಾವಣೆ ಎದುರಿಸಿದ್ದೇನೆ. ನಾನು ಹಿರಿಯ ರಾಜಕಾರಣಿಯಾಗಿ ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಕಳಂಕರಹಿತ ಸ್ವಾಭಿಮಾನದ ರಾಜಕೀಯ ಮಾಡಿದ್ದೇನೆ. ನಾನು ಯಾರಿಗೂ ತಲೆಬಾಗಿಲ್ಲ. ನೇರ ನುಡಿ ನಡೆಯಿಂದಲೇ ಇಲ್ಲಿಯವರೆಗೆ ರಾಜಕಾರಣ ಮಾಡಿದ್ದೇನೆ ಎಂದು ತಿಳಿಸಿದ‌ರು.

Advertisement

ತಾಲೂಕಿನ ಜನತೆಗೆ ಕೃತಜ್ಞತೆ: ಹಿಂದೆ ನಾನು 5 ಬಾರಿ ಚಾಮರಾಜನಗರ ಲೋಕಸಭೆ ಸದಸ್ಯನಾಗಿ ಆಯ್ಕೆಯಾದರೂ ಆ ಸಂದರ್ಭದಲ್ಲಿ ಎಚ್‌.ಡಿ.ಕೋಟೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿತ್ತು. ಕಳೆದ ಎರಡು ಚುನಾವಣೆಗಳಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ತಾಲೂಕಿನಲ್ಲಿ ನನ್ನ ನಿರೀಕ್ಷೆಗೂ ಮೀರಿ ಬಿಜೆಪಿ ಬೆಂಬಲಿಸಿ ಮತ ನೀಡಿ ಅರಸಿದ್ದೀರಿ. ತಾಲೂಕಿನ ಜನತೆಗೆ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಮುಖಂಡರಿಗೂ, ಕಾರ್ಯಕರ್ತರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ವಿಧಾನ ಪರಿಷತ್‌ ಸದಸ್ಯ ಸಿದ್ದರಾಜು, ಜಿಪಂ ಸದಸ್ಯ ವೆಂಕಟಸ್ವಾಮಿ, ಮಾಜಿ ಸದಸ್ಯೆ ಭಾಗ್ಯಲಕ್ಷ್ಮೀ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಗಿರೀಶ್‌, ವೈ.ಟಿ.ಮಹೇಶ್‌, ಜೆ.ಪಿ.ಚಂದ್ರಶೇಖರ್‌, ಸೋಮಚಾರ್‌, ಮೊತ್ತ ಬಸವರಾಜಪ್ಪ, ಪುರಸಭೆ ಮಾಜಿ ಸದಸ್ಯ ವಿವೇಕ್‌, ಎನ್‌.ಕೆ.ಮಹೇಶ್‌, ಲೋಕೇಶ್‌, ಮಾದೇಶ್‌ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನನ್ನ ಮನೆ ಮುಂದೆ ಕೈ ಮುಗಿದು ನಿಲುತ್ತಿದ್ದ ಸಿದ್ದು: ನಾನು ಸಿದ್ದರಾಮಯ್ಯನಿಗೆ ಏನು, ಯಾವ ಸಹಾಯ ಮಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ನನ್ನ ಮನೆಯ ಮುಂದೆ ಕೈ ಮುಗಿದು ನಿಂತಿದ್ದನ್ನು ಸಿದ್ದರಾಮಯ್ಯ ಮರೆತಿದ್ದಾರೆ. ನಾನು ವಾಜಪೇಯಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕಂದಾಯ ಸಚಿವನಾಗಿ ಉತ್ತಮವಾಗಿ ಕೆಲಸ ಮಾಡಿದರೂ ಯಾವುದೇ ಕಾರಣ ನೀಡದೆ ಕೈಬಿಟ್ಟರು. ಸಿದ್ದರಾಮಯ್ಯನನ್ನು ಜರಿದಿರುವುದಕ್ಕೂ ಕಾರಣ ನೀಡಿದ್ದೇನೆ. ಯಾವುದಕ್ಕೂ ಉತ್ತರ ನೀಡಲಿಲ್ಲ. ಸಿದ್ದರಾಮಯ್ಯ ನನಗಿಂತ ಚಿಕ್ಕವ, ಸಿದ್ದರಾಮಯ್ಯನವರೇ ಅನ್ನಬೇಕಂತೆ ಎಂದು ಶ್ರೀನಿವಾಸ್‌ ಪ್ರಸಾದ್‌ ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next