Advertisement

ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

11:29 PM Sep 22, 2019 | Lakshmi GovindaRaju |

ಮೈಸೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿದ್ದು, ಉಪಚುನಾವಣೆಯಲ್ಲೂ ಅವರನ್ನು ಜನ ತಿರಸ್ಕರಿಸುತ್ತಾರೆ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಭಾನುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೈತ್ರಿಯ ಮಾತನ್ನಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೈತ್ರಿ ಬೇಡ ಎನ್ನುತ್ತಾರೆ. ಜೆಡಿಎಸ್‌ನಲ್ಲೂ ಅದೇ ಪರಿಸ್ಥಿತಿ ಇದೆ. ಅವರು ಮೈತ್ರಿ ಮಾಡಿಕೊಂಡರೂ ಅಷ್ಟೆ, ಮಾಡಿಕೊಳ್ಳದಿದ್ದರೂ ಅಷ್ಟೆ ಎಂದು ಹೇಳಿದರು.

ಈಶ್ವರಪ್ಪ-ಜಿಟಿಡಿ ಭೇಟಿ: ಬಿಜೆಪಿ ನಾಯಕರೊಂದಿಗೆ ಆತ್ಮೀಯರಾಗಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಚಿವ ಕೆ.ಎಸ್‌.ಈಶ್ವರಪ್ಪ ಚಾಮುಂಡಿಬೆಟ್ಟದಲ್ಲಿ ಮುಖಾಮುಖೀಯಾದರು. ಈಶ್ವರಪ್ಪ ನಿರ್ಗಮನದ ಸಂದರ್ಭದಲ್ಲಿ ಆಗಮಿಸಿದ ಜಿಟಿಡಿ, ದೇವಾಲಯದ ಆವರಣದಲ್ಲೇ ಹೂಗುತ್ಛ ನೀಡಿ ಸ್ವಾಗತಿಸಿದರು. ಈಶ್ವರಪ್ಪನವರ ಯೋಗ ಕ್ಷೇಮ ವಿಚಾರಿಸಿದ ಜಿಟಿಡಿ, ಚಾಮುಂಡೇಶ್ವರಿ ನಿಮಗೆ ಆಯುಷ್ಯ, ಆರೋಗ್ಯ ಕರುಣಿಸಲೆಂದು ಶುಭ ಕೋರಿದರು.

ಈಶ್ವರಪ್ಪಗೆ ಘೇರಾವ್‌: ಈ ಹಿಂದೆ ಸಿದ್ದರಾಮಯ್ಯನವರನ್ನು ವಡ್ಡ ಎಂದು ನಿಂದಿಸಿದ್ದ ಹಿನ್ನೆಲೆಯಲ್ಲಿ ಭೋವಿ ಸಮಾಜದವರು ಈಶ್ವರಪ್ಪ ಅವರಿಗೆ ಚಾಮುಂಡಿಬೆಟ್ಟದಲ್ಲಿ ಘೇರಾವ್‌ ಹಾಕಿದರು. “ಗೋ ಬ್ಯಾಕ್‌ ಈಶ್ವರಪ್ಪ’ ಎಂದು ಘೋಷಣೆ ಕೂಗಿ, ನಮ್ಮ ಜಾತಿ ಯನ್ನು ಯಾಕೆ ನಿಂದನೆ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಶ್ವರಪ್ಪ ಅವರನ್ನು ಸಮಾಧಾನಪಡಿಸಿ, ಅಲ್ಲಿಂದ ನಿರ್ಗಮಿಸಿದರು.

ಈ ಮಧ್ಯೆ, ಹುಣಸೂರು ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಮೈಸೂರು ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಈಶ್ವರಪ್ಪ ಅವರು, ಸರಕಾರಿ ಕಾರಿನಲ್ಲೇ ಪತ್ನಿ ಜತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದರು. ಕುರುಬ ಸಮುದಾಯದ ನಾಯಕರೊಂದಿಗೆ ಸರಕಾರಿ ಕಾರಿನಲ್ಲಿ ಓಡಾಡಿದರು. ಹೀಗಾಗಿ, ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next