ಚಿತ್ರದುರ್ಗ: ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯಲ್ಲಿ ಏಳೆಂಟು ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ. 12 ರಿಂದ 13 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರು ತಾಲೂಕು ಬಾಂಡ್ರಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರು ಬಿಜೆಪಿಗೆ ಹೆಚ್ಚು ಮತ ಹಾಕಿದ್ದಾರೆ ಎಂದು ತಿಳಿಸಿದರು.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಿದ್ರೆ ಸಾಕು. ವಿರೋಧ ಪಕ್ಷದಲ್ಲಿದ್ದು ಒಳ್ಳೆಯ ಕೆಲಸ ಮಾಡುತ್ತಾರೆ ಅಂತ ಜನ ಅಲ್ಲಿ ಕೂರಿಸಿದ್ದಾರೆ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಅಂತ ಜನ ಸರ್ಕಾರದ ಪರ ತೀರ್ಪು ನೀಡುತ್ತಾರೆ ಎಂದರು.
ಸಿದ್ದರಾಮಯ್ಯ ಅವರನ್ನ ಬಿಜೆಪಿಗೆ ಕರೆ ತರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾತನಾಡಿ, ಸಿದ್ದರಾಮಯ್ಯರನ್ನು ಕರೆದುಕೊಂಡು ಬರುವುದಾಗಿ ರಮೇಶ್ ಹೇಳಿರಬಹುದು. ಮೊದಲಿನಿಂದಲೂ ಅವರ ಸ್ನೇಹ ಚೆನ್ನಾಗಿದೆ. ಸಿದ್ದರಾಮಯ್ಯ ಪೂರ್ಣ ಕಾಂಗ್ರೆಸಿಗರಲ್ಲ, ವಲಸೆ ಕಾಂಗ್ರೆಸ್ಸಿಗ. ಜೆಡಿಎಸ್ ನಲ್ಲಿದ್ದು ಕಾಂಗ್ರೆಸ್ ಗೆ ಜಿಗಿದರು, ಕಾಂಗ್ರೆಸ್ ನಿಂದ ಎಲ್ಲಿಗೆ ಜಿಗಿಯುತ್ತಾರೆ ಗೊತ್ತಿಲ್ಲ. ಅವರಿಗೆ ಈಗ ಅಧಿಕಾರ ಬೇಕಾಗಿದೆ. ಮುಖ್ಯಮಂತ್ರಿ ಆಗುತ್ತೀರಿ ಎಂದು ಬೇರೆ ಪಕ್ಷದವರು ಕರೆದರೆ ಅವರ ಹಿಂದೆಯೇ ಹೋಗುತ್ತಾರೆ. ಜೆಡಿಎಸ್ ನಲ್ಲಿ ಡಿಸಿಎಂ ಮಾಡಲಿಲ್ಲ ಅಂತ ಕಾಂಗ್ರೆಸ್ ಗೆ ಬಂದರು. ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ, ವಿರೋಧ ಪಕ್ಷದ ನಾಯಕ ಮಾಡಲ್ಲ ಎಂದರೆ ಬೇರೆ ಪಕ್ಷಕ್ಕೆ ಜಿಗಿಯಲೂ ರೆಡಿ ಇರ್ತಾರೆ ಎಂದು ಚೇಡಿಸಿದರು.