ಹುಬ್ಬಳ್ಳಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷ ಆರಂಭಿಸುತ್ತಾರೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಬಿಜೆಪಿ ಸಹ ಅವರನ್ನು ಕೈಬಿಡುವುದಿಲ್ಲ. ಪಕ್ಷದಲ್ಲಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮಲು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಅವರು ಸಾರ್ವಜನಿಕರ ಬದುಕಲ್ಲಿ ಬರಬೇಕು ಎಂದು ಅಷ್ಟೇ ಹೇಳಿದ್ದಾರೆ ಹೊರತು ಪಕ್ಷ ಮೀರಿ, ಪಕ್ಷಕ್ಕೆ ತೊಂದರೆ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಕುರಿತು ನಾನು ಸಹ ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಿದ್ದೇನೆ. ಮುಖ್ಯಮಂತ್ರಿ ಅವರು ಸಹ ಅವರೊಂದಿಗೆ ಮಾತನಾಡಿದ್ದಾರೆ ಎಂದರು.
ಜನಾರ್ಧನ ರೆಡ್ಡಿ ಅವರೊಂದಿಗೆ ಸ್ನೇಹಕ್ಕೆ ಧಕ್ಕೆ ಬರುವುದಿಲ್ಲ. ಪಕ್ಷ ರಾಜಕೀಯವಾಗಿ ಸ್ಥಾನ-ಮಾನ ನೀಡಿದೆ. ಸ್ನೇಹ ಹಾಗೂ ಪಕ್ಷ ಬಿಡಲಾರದ ಸಂದರ್ಭದಲ್ಲಿ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಅವರೇ ಪರಿಹಾರ ಒದಗಿಸುತ್ತಾರೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಸೂದೆ ಕುರಿತು ಸದಸದಲ್ಲಿ ಚರ್ಚೆ ನಡೆಸಲಿದೆ. ರಪಾಂಟ ಮಾಡುವುದು ಬೇಡ. ಎಲ್ಲರೂ ಒಮ್ಮತದಿಂದ ಮಸೂದೆ ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ ಸಣ್ಣಪುಟ್ಟ ವಿಚಾರವಾಗಿ ವಿಪಕ್ಷದವರು ಸದನವೇ ನಡೆಯದಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ಸೌಲಭ್ಯ ಒದಗಿಸುವ ಕಾರ್ಯ ನಾನು ಮಾಡುತ್ತೇನೆ. ಯಾವ ಹಳ್ಳಿಗಳಿಗೆ ರಸ್ತೆ ಹಾಗೂ ಸಾರಿಗೆ ಸಂಪರ್ಕವಿಲ್ಲ ಅಲ್ಲಿಗೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.