ಬೆಂಗಳೂರು:ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಅಕ್ಟೋಬರ್ 4ರಂದು ಉಪ ಚುನಾವಣೆ ನಡೆಯಲಿದ್ದು, ಈವರೆಗೆ ಐದು ನಾಮಪತ್ರ ಸಲ್ಲಿಕೆಯಾಗಿದೆ. ಏತನ್ಮಧ್ಯೆ ಅಡ್ಡಮತದಾನ ಮಾಡಿಸುವ ವಿಶ್ವಾಸ ಇಲ್ಲದ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನಪರಿಷತ್ ಉಪಚುನಾವಣೆ ಕಣದಿಂದ ಹಿಂದೆ ಸರಿದಿದೆ.ಇದರಿಂದಾಗಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ ಅಡ್ಡಮತದಾನದ ಬಿಕ್ಕಟ್ಟಿನಿಂದ ಪಾರಾದಂತಾಗಿದೆ.
ವಿಧಾನಪರಿಷತ್ ಸದಸ್ಯರಾಗಿದ್ದ ಕೆಎಸ್ ಈಶ್ವರಪ್ಪ, ಜಿ.ಪರಮೇಶ್ವರ್ ಹಾಗೂ ವಿ.ಸೋಮಣ್ಣ ಅವರಿಂದ ತೆರವಾದ ಮೂರು ಪರಿಷತ್ ಸ್ಥಾನಗಳಿಗೆ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆ.24 ಕೊನೆಯ ದಿನ. ಮೂರು ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಎಂಸಿ ವೇಣುಗೋಪಾಲ್, ನಜೀರ್ ಅಹ್ಮದ್ ಹಾಗೂ ಜೆಡಿಎಸ್ ನಿಂದ ರಮೇಶ್ ಗೌಡ ಸೇರಿದಂತೆ ಐದು ಮಂದಿ ನಾಮಪತ್ರ ಸಲ್ಲಿಸಿರುವುದಾಗಿ ಚುನಾವಣಾಧಿಕಾರಿ ಎಂಎಸ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಏತನ್ಮಧ್ಯೆ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿಸುವ ಬಗ್ಗೆ ಬಿಜೆಪಿಗೆ ವಿಶ್ವಾಸ ಇಲ್ಲದ ಹಿನ್ನೆಲೆಯಲ್ಲಿ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಮುಖಂಡರ ಜೊತೆ ಚರ್ಚೆ ನಡೆಸಿ
ಕಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿಯಿಂದ ಸಿಪಿ ಯೋಗೀಶ್ವರ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಬಿಜೆ ಪುಟ್ಟಸ್ವಾಮಿ, ಡಿಎಸ್ ವೀರಯ್ಯ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಬಿಜೆಪಿ ಗೆಲುವಿಗೆ ಬೇಕಾದ 112 ಸಂಖ್ಯಾ ಬಲ ಇಲ್ಲದೆ ಇದ್ದ ಕಾರಣ ಕಣದಿಂದ ಹಿಂದೆ ಸರಿದಿದೆ.