ವಾಡಿ: ಈ ಬಾರಿ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು 50,000 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.
ಚಿತ್ತಾಪುರ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ತಹಸಿಲ್ದಾರ್ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಿಯಾಂಕ್ ಖರ್ಗೆ ಅವರು ತಮ್ಮ 10 ವರ್ಷದ ಆಡಳಿತ ಅವಧಿಯಲ್ಲಿ ಚಿತ್ತಾಪುರ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ವಿಶೇಷವಾಗಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ತಾಲೂಕಿನಲ್ಲಿ ಭೀಮಾ ಮತ್ತು ಕಾಗಿಣ್ಣ ನದಿಗಳು ಹರಿಯುತ್ತಿದ್ದರೂ ಈ ಭಾಗದ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಅವರು ರೈತ ವಿರೋಧಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಬುರಾವ್ ಚಿಂಚನ್ಸೂರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಇಚ್ಛಾ ಶಕ್ತಿ ಮಲ್ಲಿಕಾರ್ಜುನ ಖರ್ಗೆ ಅವರಿಗಿಲ್ಲ. ಕೇವಲ ಅವರ ಪುತ್ರ ಪ್ರಿಯಾಂಕರ್ ಗೆ ಅವರನ್ನು ಗೆಲ್ಲಿಸಲು ಮಾತ್ರ ಬಾಬುರಾವ್ ಚಿಂಚನ್ಸುರವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಒಂದೊಮ್ಮೆ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಹೊರತಾಗಿ ಬೇರೆ ಅಭ್ಯರ್ಥಿದ್ದಿದ್ದರೆ ಬಾಬುರಾವ್ ಚಿಂಚೋನ್ಸರ್ ಅವರನ್ನು ಪಕ್ಷಕ್ಕೆ ಕರೆತರುತ್ತಿರಲಿಲ್ಲ. ಈ ಬಾರಿ ಕೂಲಿ ಸಮಾಜವಾಗಲಿ ದಲಿತ ಸಮುದಾಯವಾಗಲಿ ಬಂಜಾರ ಲಿಂಗಾಯತ್ ಸಮುದಾಯ ಕುರುಬ ಸಮಾಜ ಭೋವಿ ಸಮಾಜ ಹೀಗೆ ಪ್ರತಿಯೊಂದು ಸಮಾಜವು ಪ್ರಿಯಾಂಕರ್ ಗೆ ವಿರುದ್ಧ ಮತ ಹಾಕಿ ಸೇಡು ತೆರೆಸಿಕೊಳ್ಳಲಿವೆ ಎಂದು ಎನ್. ರವಿ ಕುಮಾರ್ ಕಿಡಿಕಾರಿದರು.
ಇದನ್ನೂ ಓದಿ: Congress ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶೆಟ್ಟರ್, ನಟಿ ರಮ್ಯಾ, ಸಾಧು ಕೋಕಿಲ
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಲಾಪುರೆ, ಬಿಜೆಪಿ ಮುಖಂಡರಾದ ಲಿಂಗಾರೆಡ್ಡಿ ಗೌಡ ಭಾಸ್ ರೆಡ್ಡಿ, ಚಂದ್ರಶೇಖರ್ ಅವಂಟಿ ಉಪಸ್ಥಿತರಿದ್ದರು. ನಂತರ ನಡೆದ ಬೃಹತ್ ಮೆರವಣಿಗೆಯಲ್ಲಿ ಕ್ಷೇತ್ರದ ಸಾವಿರಾರು ಜನ ಪಾಲ್ಗೊಂಡಿದ್ದರು. ಕಮಲ ಬಾವುಟ ಹಿಡಿದು ಮೋದಿ ಮೋದಿ ಎಂದು ಘೋಷಣೆ ಮೂಲಕ ಶಕ್ತಿಪ್ರದರ್ಶನ ನಡೆಸಿದರು. ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್ ಎಂಎನೋರ, , ಪೋಮ ರಾಥೋಡ್, ವಿಠ್ಠಲ್ ವಾಲ್ಮೀಕಿ ನಾಯಕ್, ವಿನೋದ್ ಅನ್ವರ್ಕರ್, ಶರಣು ಜ್ಯೋತಿ, ವೀರಣ್ಣ ಯಾರಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಅಭ್ಯರ್ಥಿ ಮಣಿ ಕಂಠ ರಾಠೋಡ ಅವರು ಅಕ್ಕಮಹಾದೇವಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಬಸವೇಶ್ವರ ಪ್ರತಿಮೆ ಹಾಗೂ ಅಂಬೇಡ್ಕರ್ ಪ್ರತಿಮೆಗಳಿಗೆ ಪುಷ್ಪಮಾಲೆ ಹಾಕಿ ಗೌರವಿಸಿದರು.