ಮಂಗಳೂರು: ‘ಸಬ್ ಕೇ ಸಾತ್, ಸಬ್ ಕೇ ವಿಕಾಸ್’ ಘೋಷಣೆಯೊಂದಿಗೆ ಇಡೀ ದೇಶದ ಎಲ್ಲ ವರ್ಗಗಳ ಜನರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಅವರ ಜನಪರ ಆಡಳಿತದ ಫಲವಾಗಿ ಕರ್ನಾಟಕದಲ್ಲೂ ಬಿಜೆಪಿ ಬಹುಮತದೊಂದಿಗೆ ಆಡಳಿತಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮ ಹೇಳಿದರು. ಬುಧವಾರ ನಗರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯಂತಹ ಪ್ರಧಾನಿಯನ್ನು ಪಡೆದಿರುವುದು ನಮ್ಮೆಲ್ಲರ ಅದೃಷ್ಟ. ಅವರ ಹತ್ತು ಹಲವು ಯೋಜನೆಗಳಿಂದ ಕರ್ನಾಟಕದಲ್ಲಿಯೂ ಸಾಕಷ್ಟು ಮಂದಿ ಪ್ರಯೋಜನ ಪಡೆದಿದ್ದಾರೆ ಎಂದರು.
ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ರೈತರು ಫಸಲ್ ವಿಮಾ ಯೋಜನೆಯ ಲಾಭ ಪಡೆದಿದ್ದಾರೆ. ವಿಶೇಷವಾಗಿ ಯುವಜನತೆಯ ಕೌಶಲವೃದ್ಧಿಗೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಗೂ ಮಹತ್ವ ನೀಡಿದ್ದಾರೆ. ಮುದ್ರಾ ಯೋಜನೆಯಲ್ಲಿ ರಾಜ್ಯದಲ್ಲಿ 1.27 ಕೋ.ರೂ.ಗಳ ಸಾಲ ಪಡೆಯಲಾಗಿದೆ. ಹೆದ್ದಾರಿ ಅಭಿವೃದ್ಧಿಗೂ ಕೇಂದ್ರ ಸರಕಾರ ವಿಶೇಷ ಒತ್ತು ನೀಡಿದ್ದು, ರಾಜ್ಯದಲ್ಲಿ 6,000 ಕಿ.ಮೀ.ಗೂ ಅಧಿಕ ಉದ್ದದ ಹೆದ್ದಾರಿ ಅಭಿವೃದ್ಧಿ ಕಂಡಿದೆ ಎಂದರು.
ರಾಜ್ಯ ಸರಕಾರದಿಂದ ದುರಾಡಳಿತದ ಫಲವಾಗಿ ಕರಾವಳಿ ಭಾಗದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಸರಕಾರವು ಕ್ರಿಮಿನಲ್ ಚಟುವಟಿಕೆ ನಡೆಸುವವರಿಗೆ ಬೆಂಬಲ ನೀಡುವ ಕಾರ್ಯವನ್ನು ಮಾಡುತ್ತಿದೆ. ಕೇಂದ್ರ ಸರಕಾರ ನೀಡಿದ ಅನುದಾನವನ್ನೂ ರಾಜ್ಯ ಸರಕಾರ ಸರಿಯಾಗಿ ಬಳಕೆ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯ ವಕ್ತಾರ ಅನ್ವರ್ ಮಾಣಿಪ್ಪಾಡಿ ಮಾತನಾಡಿ, ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿರುವ ಸಂದರ್ಭದಲ್ಲಿ ಸರಕಾರವು ಅಲ್ಪಸಂಖ್ಯಾಕರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಒಟ್ಟು 910 ಕೋ.ರೂ.ಗಳ ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಕೋಮುಭಾವನೆ ಕೆರಳಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ. ಕೋಮುಗಲಭೆಗಳು ನಡೆದಾಗ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗುತ್ತದೆ ಎಂದು ಯು.ಎನ್.ಒ. ವರದಿ ಹೇಳಿದೆ ಎಂದರು.
ಹಜ್ ಭವನ ನಿರ್ಮಾಣಕ್ಕೆ ಬಿಜೆಪಿ ಸರಕಾರ 50 ಕೋ.ರೂ. ನೀಡಿತ್ತು. ಕ್ರೈಸ್ತರ ಅಭಿವೃದ್ಧಿ ನಿಗಮಕ್ಕೂ 50 ಕೋ.ರೂ.ಗಳನ್ನು ಬಿಜೆಪಿ ನೀಡಿತ್ತು. ಬಿಜೆಪಿಯು ಅಲ್ಪಸಂಖ್ಯಾಕರನ್ನು ಎಂದಿಗೂ ಬಡವರಾಗಲು ಬಿಡುವುದಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರದ ಶಾದಿ ಭಾಗ್ಯ ಯೋಜನೆ ಫಲಾನುಭವಿಗಳನ್ನೇ ತಲುಪಿಲ್ಲ ಎಂದು ಆರೋಪಿಸಿದರು.