Advertisement
ಶುಕ್ರವಾರ ಸಂಜೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ಅವರ ಪಕ್ಕದಲ್ಲೇ ಕುಳಿತಿದ್ದ ಮೋದಿ ಅವರು, ಆರಂಭದಲ್ಲಿ ಕೆಲವು ಪ್ರಾಸ್ತಾವಿಕ ನುಡಿಗಳನ್ನಷ್ಟೇ ಆಡಿದರು. ನಾವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ, ಕಳೆದ ಕೆಲವು ದಶಕಗಳಿಂದಲೂ ಸತತ ಎರಡನೇ ಬಾರಿಗೆ ಪಕ್ಷವೊಂದು ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಿರಲಿಲ್ಲ. ಈ ಸಾಧನೆಯನ್ನು ನಾವು ಮಾಡಲಿದ್ದೇವೆ ಎಂದು ಹೇಳಿದರು. ಹೊಸ ಮಾದರಿಯ ಆಡಳಿತವನ್ನು ನಾವು ಅನಾವರಣಗೊಳಿಸಿದ್ದೇವೆ. ಪ್ರತಿ ವ್ಯಕ್ತಿಗೂ ಆಡಳಿತವನ್ನು ತಲುಪಿಸಿದ್ದೇವೆ. ವಿಶ್ವವನ್ನೇ ಪ್ರಭಾವಿಸುವ ಶಕ್ತಿ ಭಾರತಕ್ಕಿದೆ ಎಂದು ಪ್ರಧಾನಿ ತಿಳಿಸಿದರು.
Related Articles
Advertisement
ಗಾಂಧಿ ಬಗ್ಗೆ ಹೇಳಿಕೆ ನೀಡಿದ ಸಾಧ್ವಿ ಸೇರಿದಂತೆ ಇತರ ನಾಯಕರಿಗೆ ನೋಟಿಸ್ ನೀಡಿದ್ದೇವೆ. ಈ ನಾಯಕರ ಹೇಳಿಕೆಗಳು ವೈಯಕ್ತಿಕವಾಗಿವೆ ಮತ್ತು ಇವು ಪಕ್ಷಕ್ಕೆ ಸಂಬಂಧಿಸಿಲ್ಲ. ಅವರಿಂದ ಪ್ರತಿಕ್ರಿಯೆ ಕೇಳಿದ್ದೇವೆ. ಅದಕ್ಕೆ ಅನುಗುಣವಾಗಿ ನಾವು ಶಿಸ್ತುಕ್ರಮ ಬಗ್ಗೆ ಯೋಚಿಸುತ್ತೇವೆ ಎಂದಿದ್ದಾರೆ ಶಾ.
ಪ್ರಚಾರ ಕಾರ್ಯ ಯಶಸ್ವಿ: ಚುನಾವಣಾ ಪ್ರಚಾರ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ನನ್ನ ಯಾವ ರ್ಯಾಲಿಯೂ ರದ್ದಾಗಿಲ್ಲ. ಕಾಪ್ಟರ್‌ಗಳು ಹಾಳಾಗಿದ್ದರೆ ಮತ್ತೂಂದು ಕಾಪ್ಟರ್‌ನಲ್ಲಿ ಪ್ರಯಾಣಿಸಿ ಎಲ್ಲ ರ್ಯಾಲಿಗಳಲ್ಲೂ ಭಾಗವಹಿಸಿದ್ದೇನೆ. ನನ್ನ ಚುನಾವಣಾ ಪ್ರಚಾರವನ್ನು ಅತ್ಯಂತ ಸೂಕ್ಷ್ಮವಾಗಿ ಯೋಜಿಸಿ ಮಾಡಲಾಗಿತ್ತು. ಈ ಹಿಂದಿನ ಚುನಾವಣೆಯ ವೇಳೆ ಐಪಿಎಲ್ ಪಂದ್ಯಗಳನ್ನು ನಡೆಸಲು ಅವಕಾಶ ನೀಡಿರಲಿಲ್ಲ. ಸರ್ಕಾರ ಸಶಕ್ತವಾಗಿದ್ದಾಗ ಐಪಿಎಲ್, ರಂಜಾನ್, ಶಾಲೆ ಪರೀಕ್ಷೆ ಮತ್ತು ಇತರ ಕೆಲಸಗಳೂ ಚುನಾವಣೆಯ ಜೊತೆಗೇ ನಡೆಯುತ್ತವೆ ಎಂದರು.
ಬಿಜೆಪಿ ಪ್ರಕಾರ ಇದು ಅತ್ಯಂತ ವಿಶಾಲವಾದ ಚುನಾವಣೆ. ಈ ಪ್ರಚಾರ ಕಾರ್ಯಕ್ಕೆ ನಾವು ತುಂಬಾ ಶ್ರಮ ಹಾಕಿದ್ದೇವೆ ಹಾಗೂ ಸ್ವಾತಂತ್ರ್ಯಾ ನಂತರದಲ್ಲೇ ಇಷ್ಟು ವ್ಯಾಪಕವಾಗಿ ಚುನಾವಣೆ ಪ್ರಚಾರವನ್ನು ಯೋಜಿಸಿದ್ದೇವೆ ಎಂದು ಶಾ ಹೇಳಿದ್ದಾರೆ.
ಘನತೆಯನ್ನು ಕಳೆದಿಲ್ಲಈ ಬಾರಿಯ ಪ್ರಚಾರದಲ್ಲಿ ವೈಯಕ್ತಿಕ ಟೀಕೆಗಳು ನಡೆದಿದ್ದು, ಪ್ರಚಾರದ ಘನತೆಯನ್ನೇ ಬಿಜೆಪಿ ಕಳೆದಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾ, ವಿಪಕ್ಷಗಳಿಗೆ ನಮ್ಮ ಮೇಲೆ ಆರೋಪ ಮಾಡುವುದೇ ಕೆಲಸ. ಆದರೆ ನಾವು ಎಂದೂ ಕೀಳು ಮಟ್ಟದ ಪ್ರಚಾರವನ್ನು ಆರಂಭಿಸಿಲ್ಲ. ಅಲ್ಲದೆ ಚುನಾವಣೆ ಪ್ರಚಾರದ ಭಾಷಣದಲ್ಲಿ ಹೆಚ್ಚಿನ ಸಮಯ ಸರ್ಕಾರದ ಯೋಜನೆಗಳು ಹಾಗೂ ಇತರ ವಿವರಗಳೇ ಇರುತ್ತಿದ್ದವು. ಕೇವಲ ಒಂದೆರಡು ನಿಮಿಷವಷ್ಟೇ ವಿಪಕ್ಷಗಳ ಟೀಕೆಯ ಬಗ್ಗೆ ಪ್ರತಿಕ್ರಿಯೆ ಇರುತ್ತಿತ್ತು. ಆದರೆ ಮಾಧ್ಯಮಗಳು ಇದನ್ನೇ ದೊಡ್ಡದಾಗಿಸುತ್ತಿದ್ದವು. ನಮ್ಮ ಪಕ್ಷ ದೇಶದ ಎಲ್ಲೆಡೆ ಚುನಾವಣೆ ಪ್ರಚಾರ ನಡೆಸಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರವೇ ಹಿಂಸಾಚಾರವಾಗಿದೆ. ಯಾಕೆ ಇಲ್ಲಿ ಮಾತ್ರ ಹಿಂಸಾಚಾರ ನಡೆಯುತ್ತಿದೆ ಎಂದು ಯಾಕೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ ನಮ್ಮನ್ನೇ ಪ.ಬಂಗಾಳ ಹಿಂಸೆಗೆ ಗುರಿಪಡಿಸುತ್ತಿದ್ದೀರಿ. ನಮ್ಮ ಹಲವು ಕಾರ್ಯಕರ್ತರು ಹಾಗೂ ಮುಖಂಡರು ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ಶಾ ಹೇಳಿದ್ದಾರೆ.
ಪ್ರಧಾನಿ ಸುದ್ದಿಗೋಷ್ಠಿ ಅಣಕಿಸಿದ ರಾಹುಲ್
ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರ ಮುಗಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆಯೇ ಅದೇ ಸಮಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸುದ್ದಿಗೋಷ್ಠಿ ನಡೆಸಿದರು. ರಾಹುಲ್ ಆಗಮಿಸುತ್ತಿದ್ದಂತೆಯೇ ಪ್ರಧಾನಿ ಕೂಡ ಪತ್ರಿಕಾಗೋಷ್ಠಿ ಆರಂಭಿಸಿದ್ದಾರೆ ಎಂಬುದು ತಿಳಿದು, ‘ಒಳ್ಳೆಯದು. ಸರ್ಕಾರದ ಕೊನೆಯ ದಿನಗಳಲ್ಲಿ ಅವರು ಸುದ್ದಿಗೋಷ್ಠಿ ನಡೆಸು ತ್ತಿದ್ದಾರೆ. ಅದರಲ್ಲೂ ಬಿಜೆಪಿ ಅಧ್ಯಕ್ಷರ ಜೊತೆಗೆ ಆಗಮಿ ಸುತ್ತಿದ್ದಾರಂತೆ’ ಎಂದು ವ್ಯಂಗ್ಯವಾಡಿದರು. ಅಲ್ಲದೆ, ರಫೇಲ್ ವಿವಾದ ಕುರಿತಂತೆ ನನ್ನ ಜೊತೆ ಚರ್ಚಿಸಲಿ ಎಂದು ಮತ್ತೂಮ್ಮೆ ಸವಾಲು ಹಾಕಿದ್ದಾರೆ. ಆದರೆ ಪತ್ರಕರ್ತರ ಪ್ರಶ್ನೆಗಳನ್ನು ಪ್ರಧಾನಿ ಸುದ್ದಿಗೋಷ್ಠಿಯಲ್ಲಿ ಸ್ವೀಕರಿಸಲಿಲ್ಲ ಎಂದು ತಿಳಿದ ನಂತರ ಟ್ವೀಟ್ ಮಾಡಿದ ರಾಹುಲ್, ‘ಮುಂದಿನ ಬಾರಿಯಾದರೂ ಸುದ್ದಿಗೋಷ್ಠಿಯಲ್ಲಿ ಉತ್ತರಿಸಲು ನಿಮಗೆ ಶಾ ಅವಕಾಶ ನೀಡುತ್ತಾರೆ ಎಂದು ನಾನು ಊಹಿಸುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ವೇಳೆ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿಲ್ಲ ಎಂದು ಅವರು ಆರೋಪಿಸಿದರು.
ರಾಹುಲ್ ಗಾಂಧಿಕೋರ್ಟ್‌ಗೆ ಹೋಗಲಿ
ರಫೇಲ್ ವಿಷಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ತನ್ನ ಬಳಿ ಇರುವ ಎಲ್ಲ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ನೀಡಲಿ. ರಫೇಲ್ ಡೀಲ್ನಲ್ಲಿ ಯಾವುದೇ ರಾಜಿ ಇರಲಿಲ್ಲ. ಯಾರನ್ನೂ ಓಲೈಕೆ ಮಾಡಿಲ್ಲ. ಒಂದು ಪೈಸೆ ಭ್ರಷ್ಟಾಚಾರವೂ ಆಗಿಲ್ಲ ಎಂದು ಶಾ ಹೇಳಿದ್ದಾರೆ.
ಮೇ 17ರಂದು ನಷ್ಟವಾಗಿತ್ತು: ಶಾ
2014 ರಲ್ಲಿ ಮೇ 16 ರಂದು ಲೋಕಸಭೆ ಚುನಾವಣೆ ಫಲಿತಾಂಶ ಬಂದಿತ್ತು. ಅದರ ಮರುದಿನ ಅಂದರೆ ಮೇ 17 ರಂದು, ಐದು ವರ್ಷಗಳ ಹಿಂದೆ ಇದೇ ದಿನ ಸಟ್ಟಾ ಬಜಾರ್‌ನಲ್ಲಿ ಹೂಡಿಕೆ ಮಾಡಿದ್ದವರೂ ನಷ್ಟ ಅನುಭವಿಸಿದ್ದರು. ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿದವರಿಗೆ ನಷ್ಟವಾಗಿತ್ತು ಎಂದು ಶಾ ನೆನಪಿಸಿಕೊಂಡಿದ್ದಾರೆ.
ಮೋದಿ ಹೇಳಿದ್ದು
1. ನಾನು ನಿಷ್ಠಾವಂತ ಸೈನಿಕ, ಪಕ್ಷದ ಅಧ್ಯಕ್ಷರೇ ನನಗೆ ಎಲ್ಲ .
2. ಕಳೆದ ಐದು ವರ್ಷ ಆಡಳಿತ ನಡೆಸಲು ಅನುವು ಮಾಡಿಕೊಟ್ಟ ನಿಮಗೆಲ್ಲಾ ವಂದಿಸಲು ಬಂದಿದ್ದೇನೆ.
3. ನಾವು ಅಧಿಕಾರಕ್ಕೆ ಬಂದಲ್ಲಿ, ಪ್ರಣಾಳಿಕೆಯಲ್ಲಿ ಹೇಳಿದ ಅಂಶಗಳನ್ನೆಲ್ಲಾ ಜಾರಿ ಮಾಡಲು ಶುರು ಮಾಡುತ್ತೇವೆ .
4. ಅತಿ ಶೀಘ್ರದಲ್ಲೇ ಹೊಸ ಸರ್ಕಾರ ತನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತ ತಲುಪಿಸುತ್ತೇವೆ .
5. ಆಡಳಿತ ಪಕ್ಷವೇ ಸಂಪೂರ್ಣ ಬಹುಮತದೊಂದಿಗೆ ಆರಿಸಿಬಂದಿರುವುದು ನಮ್ಮ ದೇಶದಲ್ಲಿ ನಡೆದಿಲ್ಲ. ಆದರೆ, ನಾವು ಆರಿಸಿ ಬರುತ್ತೇವೆ .
6. ಪ್ರಚಾರದ ವೇಳೆ ಉತ್ತಮ ಅನುಭವವಾಗಿದೆ. ನಮ್ಮ ಪ್ರಚಾರದ ಬಗ್ಗೆ ಶೋಧ ಮಾಡಬೇಕು ಎಂದೆನಿಸಿದರೆ ನಮ್ಮ ಅಧ್ಯಕ್ಷರಿಗೆ ಅನುಮತಿ ನೀಡುವಂತೆ ಕೇಳಿಕೊಳ್ಳುತ್ತೇನೆ. ನಮ್ಮ ಒಂದೇ ಒಂದು ಪ್ರಚಾರ ಸಭೆಯೂ ರದ್ದಾಗಲಿಲ್ಲ. ಹವಾಮಾನವೂ ನಮ್ಮ ಜತೆಯಲ್ಲೇ ಇತ್ತು.
1. ನಾನು ನಿಷ್ಠಾವಂತ ಸೈನಿಕ, ಪಕ್ಷದ ಅಧ್ಯಕ್ಷರೇ ನನಗೆ ಎಲ್ಲ .
2. ಕಳೆದ ಐದು ವರ್ಷ ಆಡಳಿತ ನಡೆಸಲು ಅನುವು ಮಾಡಿಕೊಟ್ಟ ನಿಮಗೆಲ್ಲಾ ವಂದಿಸಲು ಬಂದಿದ್ದೇನೆ.
3. ನಾವು ಅಧಿಕಾರಕ್ಕೆ ಬಂದಲ್ಲಿ, ಪ್ರಣಾಳಿಕೆಯಲ್ಲಿ ಹೇಳಿದ ಅಂಶಗಳನ್ನೆಲ್ಲಾ ಜಾರಿ ಮಾಡಲು ಶುರು ಮಾಡುತ್ತೇವೆ .
4. ಅತಿ ಶೀಘ್ರದಲ್ಲೇ ಹೊಸ ಸರ್ಕಾರ ತನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತ ತಲುಪಿಸುತ್ತೇವೆ .
5. ಆಡಳಿತ ಪಕ್ಷವೇ ಸಂಪೂರ್ಣ ಬಹುಮತದೊಂದಿಗೆ ಆರಿಸಿಬಂದಿರುವುದು ನಮ್ಮ ದೇಶದಲ್ಲಿ ನಡೆದಿಲ್ಲ. ಆದರೆ, ನಾವು ಆರಿಸಿ ಬರುತ್ತೇವೆ .
6. ಪ್ರಚಾರದ ವೇಳೆ ಉತ್ತಮ ಅನುಭವವಾಗಿದೆ. ನಮ್ಮ ಪ್ರಚಾರದ ಬಗ್ಗೆ ಶೋಧ ಮಾಡಬೇಕು ಎಂದೆನಿಸಿದರೆ ನಮ್ಮ ಅಧ್ಯಕ್ಷರಿಗೆ ಅನುಮತಿ ನೀಡುವಂತೆ ಕೇಳಿಕೊಳ್ಳುತ್ತೇನೆ. ನಮ್ಮ ಒಂದೇ ಒಂದು ಪ್ರಚಾರ ಸಭೆಯೂ ರದ್ದಾಗಲಿಲ್ಲ. ಹವಾಮಾನವೂ ನಮ್ಮ ಜತೆಯಲ್ಲೇ ಇತ್ತು.