Advertisement

ಐಟಿ ದಾಳಿ ಕಳಂಕಿತ ಸಚಿವರ ಕೈಬಿಡಲು ಬಿಜೆಪಿ ಆಗ್ರಹ

02:16 PM Aug 19, 2017 | Team Udayavani |

ದಾವಣಗೆರೆ: ಆದಾಯ ತೆರಿಗೆ ಇಲಾಖೆ ದಾಳಿಯಿಂದ ಕಳಂಕಿತರಾಗಿರುವ ರಾಜ್ಯ ಸರ್ಕಾರದ ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಮೆರವಣಿಗೆ ನಡೆಸಿದರು.

Advertisement

ಕೆ.ಬಿ. ಬಡಾವಣೆಯ ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಗಾಂಧಿ ವೃತ್ತ, ಪಿಬಿ ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿದರು. ಅಲ್ಲಿ ಬಹಿರಂಗ ಸಭೆ, ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಸಿದ್ದರಾಮಯ್ಯ ಮಂತ್ರಿಮಂಡಲದ ಡಿ.ಕೆ.ಶಿವಕುಮಾರ್‌, ರಮೇಶ್‌ ಜಾರಕಿಹೊಳಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ, ಹಣ ಇರುವುದು ಕಂಡುಬಂದಿದೆ. ಆದರೂ ಸಚಿವರನ್ನು ಮುಖ್ಯಮಂತ್ರಿಗಳು ಸಂಪುಟದಲ್ಲಿಟ್ಟುಕೊಂಡಿರುವುದು ಖಂಡನೀಯ ಎಂದರು.

ಕಾಂಗ್ರೆಸ್‌ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳಕರ್‌ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಡೆಸಿದ ದಾಳಿ ವೇಳೆ ಅಕ್ರಮ ಆಸ್ತಿ, ಹಣ ಗಳಿಸಿರುವುದು ಕಂಡುಬಂದಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಆಗ್ರಹಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ 
ಮಾತನಾಡಿ, ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಈ ಮೂವರು ಅಕ್ರಮ ಆಸ್ತಿ ಗಳಿಸಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಭ್ರಷ್ಟಮುಕ್ತ, ನುಡಿದಂತೆ ನಡೆದ ಸರ್ಕಾರ ಎಂಬುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹ ವಿಷಯದಲ್ಲಿ ಮೌನಕ್ಕೆ ಶರಣಾಗುತ್ತಾರೆ. ಒಂದು ವೇಳೆ ಅವರು ನಿಜಕ್ಕೂ ಭ್ರಷ್ಟಮುಕ್ತ ಸರ್ಕಾರ ನೀಡುವುದೇ ಆದರೆ ಈ ಕೂಡಲೇ ಈ ಮೂವರು ಕಳಂಕಿತರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಆಸ್ತಿ ಗಳಿಕೆ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. 

ರಾಜ್ಯದಲ್ಲಿ ಹಿಂದು ಸಂಘಟನೆಗಳ ಮೇಲೆ ದಬ್ಟಾಳಿಕೆ ಹಾಗೂ ಹಿಂದು ಯುವಕರ ಮಾರಣಹೋಮ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಪರ ಮಾತನಾಡುತ್ತದೆ. ಈ ಕೂಡಲೇ ರಾಜ್ಯದ ಹಿಂದುಗಳ ರಕ್ಷಣೆಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ, ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ,
ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಮುಖಂಡರಾದ ಎಚ್‌.ಎಸ್‌. ನಾಗರಾಜ್‌, ಆನಂದಪ್ಪ, ಕೆ. ಹೇಮಂತಕುಮಾರ್‌, ಸತೀಶ್‌ ಕೊಳೇನಹಳ್ಳಿ, ಪ್ರಭು ಕಲಬುರ್ಗಿ, ಬೇತೂರು ಬಸವರಾಜ್‌, ಶಿವನಗೌಡ ಪಾಟೀಲ್‌, ಸೈಯದ್‌ ಮುಬೀನ್‌, ಮನು, ಎಚ್‌.ಬಿ. ದುರುಗೇಶ್‌, ರಾಜಶೇಖರ್‌, ನಾಗರತ್ನಬಾಯಿ, ಓಂಕಾರಪ್ಪ ಮೆರವಣಿಗೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next