Advertisement

Assembly Elections: ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಇಂದು ಚುನಾವಣೆ… ಮತದಾನ ಆರಂಭ

08:21 AM Nov 17, 2023 | sudhir |

ಭೋಪಾಲ/ರಾಯ್‌ಪುರ: ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಇಂದು ಚುನಾವಣೆ ನಡೆಯಲಿದ್ದು, ಇಂದು ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೂ ಗೆಲುವು ಅನಿವಾರ್ಯವಾಗಿದ್ದು ಎರಡೂ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Advertisement

ಛತ್ತೀಸ್‌ಗಢದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯಲಿದ್ದು, 19 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಿಗೆ 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ರಾಜ್ಯ ವಿಧಾನಸಭೆಯ 230 ಸ್ಥಾನಗಳಿಗೆ 2,000ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಇಂದಿನ ಚುನಾವಣೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಕಣದಲ್ಲಿದ್ದಾರೆ. ಛತ್ತೀಸ್‌ಗಢದ ಪಟಾನ್ ಕ್ಷೇತ್ರವು ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ಕಾಂಗ್ರೆಸ್ ಛತ್ತೀಸ್‌ಗಢದ ನಡುವಿನ ತ್ರಿಕೋನ ಕದನಕ್ಕೆ ಸಾಕ್ಷಿಯಾಗಲಿದೆ.

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತಮ್ಮ ಸೋದರಳಿಯ ಮತ್ತು ಬಿಜೆಪಿಯ ವಿಜಯ್ ಬಘೇಲ್ ವಿರುದ್ಧ ಹೋರಾಡಲಿದ್ದಾರೆ. ಏತನ್ಮಧ್ಯೆ, ಜನತಾ ಕಾಂಗ್ರೆಸ್ ಛತ್ತೀಸ್‌ಗಢವು ಪಕ್ಷದ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ಸ್ಥಾನದಲ್ಲಿ ನಿಲ್ಲಿಸಿದೆ.

ಮಧ್ಯಪ್ರದೇಶದ ವಿಚಾರದಲ್ಲಿ ಹೇಳುವುದಾದರೆ 2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರಕಾರ 2020ರಲ್ಲಿ ಪತನಗೊಂಡ ಬಳಿಕ ಅಧಿಕಾರಕ್ಕೆ ಬಂದದ್ದು ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರಕಾರ. ಕರ್ನಾಟಕದಲ್ಲಿ ಇದ್ದ ಬಿಜೆಪಿ ಸರಕಾರದ ವಿರುದ್ಧ ನಲುವತ್ತು ಪರ್ಸೆಂಟ್‌ ಭ್ರಷ್ಟಾಚಾರದ ಆರೋಪ ಮಾಡಿದ್ದ ಕಾಂಗ್ರೆಸ್‌ ಮಧ್ಯಪ್ರದೇಶ ಸರಕಾರದ ವಿರುದ್ಧ ಶೇ.50 ಭ್ರಷ್ಟಾಚಾರದ ಆರೋಪ ಮಾಡಿದೆ.

Advertisement

ಕಾಂಗ್ರೆಸ್‌ ನೇತೃತ್ವದ ಸರಕಾರದ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವ ವಾಗ್ಧಾನ ಮಾಡಿದ್ದರೆ, ಕರ್ನಾಟಕದಂತೆಯೇ ಪಂಚ ಗ್ಯಾರಂಟಿಗಳನ್ನೂ ನೀಡಲಾಗಿದೆ. ಇದರೊಂದಿಗೆ, ಮುಖ್ಯಮಂತ್ರಿ ಆಗುವ ಕೊನೆಯ ಅವಕಾಶ ಕಮಲ್‌ನಾಥ್‌ ಅವರಿಗೆ ಇದುವೇ ಎಂದು ಹೇಳಲಾಗುತ್ತಿದೆ.

ಬಿಜೆಪಿ ವತಿಯಿಂದ ಯಾರನ್ನು ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿಲ್ಲ. ಹೀಗಾಗಿ, ಪಕ್ಷ ಅಧಿಕಾರ ಉಳಿಸಿಕೊಂಡರೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೇ ಹುದ್ದೆಯಲ್ಲಿ ಮುಂದುವರಿಯುವುದು ಅಸಾಧ್ಯ ಎಂಬ ವಾದಗಳೂ ಇವೆ. ಮತ್ತೂಂದು ಮಹತ್ವದ ಅಂಶವೆಂದರೆ, ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿ ಸದ್ಯ ಕೇಂದ್ರ ಸಚಿವರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾರ ಬೆಂಬಲಿಗರ ಪೈಕಿ ಕೆಲವರು ಮರಳಿ ಕಾಂಗ್ರೆಸ್‌ ಸೇರಿದ್ದಾರೆ.

ಒಟ್ಟಾರೆ ಇಂದಿನ ಚುನಾವಣೆ ಯಾರಿಗೆ ಮನ್ನಣೆ ನೀಡಲಿದೆ ಎಂಬುದು ಚುನಾವಣಾ ಫಲಿತಾಂಶದ ದಿನ ಗೊತ್ತಾಗಲಿದೆ.

ಇದನ್ನೂ ಓದಿ: Daily Horoscope: ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ

Advertisement

Udayavani is now on Telegram. Click here to join our channel and stay updated with the latest news.

Next