ಕಾಸರಗೋಡು: ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ವಿಜಯಯಾತ್ರೆ ಫೆ. 21ರಂದು ಕಾಸರಗೋಡಿನಿಂದ ಪ್ರಯಾಣ ಆರಂಭವಾಗಲಿದ್ದು, ಮಾ. 7ರಂದು ತಿರುವನಂತಪುರದಲ್ಲಿ ಸಂಪನ್ನಗೊಳ್ಳಲಿದೆ. ಅಪರಾಹ್ನ 3 ಗಂಟೆಗೆ ನಗರದ ತಾಳಿಪಡ್ಪು ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉ. ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಜಯಯಾತ್ರೆಯನ್ನು ಉದ್ಘಾಟಿಸುವರು. ಪಕ್ಷದ ಕೇರಳ- ಕರ್ನಾಟಕದ ಮುಖಂಡರು ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸುವರು.
ಸಂಚಾರದಲ್ಲಿ ಬದಲಾವಣೆ
ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಯಿದೆಯೆಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ವೇಳೆ ವಿಜಯ ಯಾತ್ರೆಯ ಸುರಕ್ಷೆ ದೃಷ್ಟಿಯಿಂದ ಪೊಲೀ ಸರು ರವಿವಾರ ವಿವಿಧೆಡೆ ಟ್ರಾಫಿಕ್ ನಿಯಂತ್ರಣ ಏರ್ಪಡಿಸಿದ್ದಾರೆ.
ಅಪರಾಹ್ನ 3 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ವಿದ್ಯಾನಗರದಿಂದ ಕುಂಬಳೆಯ ವರೆಗೆ ಟ್ರಾಫಿಕ್ ನಿಯಂತ್ರಣ ಏರ್ಪಡಿಸಲಾಗಿದೆ.
ಅದರಂತೆ ಮಂಗಳೂರು ಭಾಗದಿಂದ ಕಾಸರಗೋಡು, ಕಣ್ಣೂರು ಭಾಗಕ್ಕೆ ಸಾಗುವ ವಾಹನಗಳು ಕುಂಬಳೆ – ಸೀತಾಂಗೋಳಿ- ಉಳಿಯತ್ತಡ್ಕ – ಉದಯಗಿರಿ- ವಿದ್ಯಾನಗರ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಬೇಕು. ಅಲ್ಲದೆ ಕುಂಬಳೆ, ಮಂಗಳೂರು ಭಾಗಕ್ಕೆ ಸಾಗುವ ವಾಹನಗಳು ವಿದ್ಯಾ ನಗರ, ಉದಯಗಿರಿ, ಉಳಿಯತ್ತಡ್ಕ, ಸೀತಾಂಗೋಳಿ, ಕುಂಬಳೆ ಮೂಲಕ ಸಾಗಬೇಕಾಗಿದೆ.
ಕುಂಬಳೆ, ಮೊಗ್ರಾಲ್ ಪುತ್ತೂರು ಭಾಗದ ಸಣ್ಣ ವಾಹನಗಳು ಕಾಸರಗೋಡು ನಗರಕ್ಕೆ ಬರಲು ಚೌಕಿ, ಉಳಿಯತ್ತಡ್ಕ, ವಿದ್ಯಾನಗರ ರಸ್ತೆ ಬಳಸಬೇಕು. ಟ್ಯಾಂಕರ್ ಲಾರಿಗಳು ಸಾಧ್ಯವಾದರೆ ಕುಂಬಳೆ, ಮೊಗ್ರಾಲ್ ರಸ್ತೆ ಬದಿಯಲ್ಲಿ ನಿಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಎಡಿಜಿಪಿ ಕಾರ್ಯಕ್ರಮ ನಡೆಯುವ ತಾಳಿಪಡು³ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಜ್ಯ ಐಜಿ ಅಶೋಕ್ ಯಾದವ್ ಕೂಡ ಭೇಟಿ ನೀಡಿದ್ದಾರೆ. ಎಸ್‌ಪಿಜಿ ಯ ಸಹಾಯದೊಂದಿಗೆ ಮೈದಾನದ ಪೂರ್ಣ ನಿಯಂತ್ರಣವನ್ನು ಪೊಲೀಸರು ವಹಿಸಿದ್ದಾರೆ.