ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಭರ್ಜರಿ ರೋಡ್ ಶೋ ನಡೆಸಿದರು. ವೃಷಭಾವತಿನಗರದ ಶಿವನ ದೇವಸ್ಥಾನದ ಎದು ರಿನ ಮೈದಾನದಿಂದ ತೆರೆದ ವಾಹನದಲ್ಲಿ ಸಂಚರಿಸಿ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಮತ ಬೇಟೆ ನಡೆಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಬಿಜೆಪಿ ಕಾರ್ಯಕರ್ತರು, ಮುಖಂಡರು ಅಭ್ಯರ್ಥಿ ಗೋಪಾಲಯ್ಯ ಗೆಲುವಿಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನ ಬೆಂಬಲ ಗಮನಿಸಿ ಎಲ್ಲ ವರ್ಗದ ಜನರು ಬಿಜೆಪಿಯ ಜತೆಗಿದ್ದಾರೆ. ಆದ್ದರಿಂದ ಗೋಪಾಲಯ್ಯ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಅದರಲ್ಲೂ ರಾಜಧಾನಿಯಲ್ಲಿ ಬಿಜೆಪಿ ಅಭ್ಯರ್ಥಿಗಳಲ್ಲಿ ಹೆಚ್ಚಿನ ಮತ ಪಡೆಯಲು ಪೈಪೋಟಿ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಚುನಾವಣೆ ಬಯಸಿದ್ದಾರೆ. ಮತದಾರರು ಇದಕ್ಕೆ ಅವಕಾಶ ಕೊಡುವುದಿಲ್ಲವೆಂಬ ಬಲವಾದ ನಂಬಿಕೆ ಇದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಮಾತನಾಡಿ, ಏಳು ವಾರ್ಡುಗಳಲ್ಲೂ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ. ಮತ ಕೇಳಲು ಮನೆ ಬಾಗಿಲಿಗೆ ತೆರಳಿದಾಗ ಜನರ ಭಾವನೆ ಅರ್ಥವಾಗುತ್ತಿದೆ. ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿ, ಆತ್ಮೀಯವಾಗಿ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ. ಇದನ್ನೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಹಾಗಾಗಿ ಕ್ಷೇತ್ರದ ಜನತೆ ಬಿಜೆಪಿಗೆ ದೊಡ್ಡ ಗೆಲುವು ನೀಡಲಿದ್ದಾರೆ ಎಂದರು.
ರೋಡ್ ಶೋಗೂ ಮುನ್ನ ಕ್ಷೇತ್ರದ ವಿವಿಧೆಡೆ ಪ್ರಚಾರ ಸಮಯದಲ್ಲಿ ಅಭ್ಯರ್ಥಿ ಗೋಪಾಲಯ್ಯ ಅವರನ್ನು ಮಂಗಳಮುಖೀಯರು ಹಿರಿಯ ಮುಸ್ಲಿಂ ಮಹಿಳೆಯರು ಆಶೀರ್ವದಿಸಿದ್ದು ವಿಶೇಷವಾಗಿತ್ತು ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಎಸ್.ಸುರೇಶ್ ಕುಮಾರ್, ಮುಖಂಡರಾದ ನೆ.ಲ.ನರೇಂದ್ರಬಾಬು, ಸುಬ್ಬನರಸಿಂಹ, ಎಸ್.ಹರೀಶ್, ಎಂ.ನಾಗರಾಜು ಇತ ರರು ಇದ್ದರು.