Advertisement

ಜಿಲ್ಲಾವಾರು ಸಾಧನೆಯಲ್ಲಿ ಉಡುಪಿ ಪ್ರಥಮ: ಮಟ್ಟಾರು

01:46 AM Feb 06, 2020 | Team Udayavani |

ಉಡುಪಿ: ಜಿಲ್ಲಾ ಬಿಜೆಪಿಯು ಭಾರೀ ಸಂಖ್ಯೆಯ ಕಾರ್ಯಕರ್ತರನ್ನು ಒಗ್ಗೂಡಿಸುವ ಹಾಗೂ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಜಿಲ್ಲಾವಾರು ಸಾಧನೆ ಪಟ್ಟಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಬಿಜೆಪಿ ನಿರ್ಗಮನ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು. ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಧ್ಯಕ್ಷರ ಹಾಗ‌ೂ ವಿವಿಧ ಮಂಡಲಗಳ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಪಕ್ಷಕ್ಕೆ ಸತತ ಗೆಲುವು
ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಜಿ.ಪಂ., ತಾ.ಪಂ., ಸ್ಥಳೀಯಾಡಳಿತ, ವಿಧಾನಸಭೆ, ಲೋಕಸಭೆ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದೇನೆ. ಪಕ್ಷದ ಅಭೂತಪೂರ್ವ ಗೆಲುವಿಗೆ ಬೂತ್‌ ಮಟ್ಟದ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಹಕಾರ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕರ್ತರ ಪಕ್ಷ
ಜಿಲ್ಲಾಧ್ಯಕ್ಷ ಪದವಿಗೆ ಗೌರವ ತರುವ ಕೆಲಸ ನಮ್ಮಿಂದಾಗಬೇಕು. ತಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತದೆ. ಪಕ್ಷದ ಏಳಿಗೆಗೆ ಹಗಲಿರುಳು ದುಡಿದ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಹಿಂದೆ ಡಾ| ವಿ.ಎಸ್‌. ಆಚಾರ್ಯ ಅವರು ಒಬ್ಬ ವ್ಯಕ್ತಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಲು 10 ದಿನಗಳ ಕಾಲ ಅಲೆದಾಡಿದ್ದರು. ಇಂದು ಅದೇ ಕೆಲಸದಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಮ್ಮಾನ
ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಬೈಂದೂರಿನ ಯು.ಕೆ. ಸದಾನಂದ, ಕುಂದಾಪುರದ ಸುರೇಶ್‌ ಶೆಟ್ಟಿ, ಉಡುಪಿ ನಗರದ ಪ್ರಭಾಕರ ಪೂಜಾರಿ, ಗ್ರಾಮಾಂತರದ ಪ್ರತಾಪ್‌ ಹೆಗ್ಡೆ, ಕಾಪುವಿನ ಪ್ರಕಾಶ ಶೆಟ್ಟಿ ಪಾದೆಬೆಟ್ಟು, ಕಾರ್ಕಳದ ಮಣಿರಾಜ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ನಿಯೋಜಿತ ಮಂಡಲದ ಅಧ್ಯಕ್ಷರಾದ ಬೈಂದೂರಿನ ಎಂ. ದೀಪಕ್‌ ಕುಮಾರ್‌ ಶೆಟ್ಟಿ, ಕುಂದಾಪುರದ ಶಂಕರ ಅಂಕದಕಟ್ಟೆ, ಉಡುಪಿ ಗ್ರಾಮಾಂತರದ ವೀಣಾ ವಿ. ನಾಯಕ್‌, ಉಡುಪಿ ನಗರದ ಮಹೇಶ್‌ ಠಾಕೂರ್‌, ಕಾಪುವಿನ ಶ್ರೀಕಾಂತ್‌ ನಾಯಕ್‌, ಕಾರ್ಕಳದ ಮಹಾವೀರ್‌ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ವಿಭಾಗೀಯ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ನವೀನ್‌ ಶೆಟ್ಟಿ ಕುತ್ಯಾರು ಸ್ವಾತಿಸಿ, ಮನೋಹರ್‌ ವಂದಿಸಿದರು. ಗಿರೀಶ್‌ ಅಂಚನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

ಇನ್ನಷ್ಟು ಗಟ್ಟಿಗೊಳಿಸುವೆ: ಸುರೇಶ್‌ ನಾಯಕ್‌
ನಿಯೋಜಿತ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಅಧಿಕಾರ ಹಾಗೂ ಸಮ್ಮಾನ ಸ್ವೀಕರಿಸಿ ಮಾತನಾಡಿ, ಮಂಡಲದ ಅಧ್ಯಕ್ಷ ಸ್ಥಾನದಿಂದ ಜಿಲ್ಲಾಧ್ಯಕ್ಷವರೆಗಿನ ಸ್ಥಾನವನ್ನು ಪಕ್ಷ ನೀಡಿದೆ. ಈ ಅನುಭವದಿಂದ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತೇನೆ. ಸಹಕಾರಿ ರಂಗದಲ್ಲಿ ಬಿಜೆಪಿ ಸದಸ್ಯರು ಭದ್ರವಾಗಿ ನೆಲೆಯೂರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಕಾರ್ಯಕ್ರಮಗಳು ಇಲ್ಲದ ಸಂದರ್ಭದಲ್ಲಿ ಕಾರ್ಯಕರ್ತರಿಗಾಗಿ ಪ್ರತಿನಿತ್ಯ ಸಂಜೆ ಪಕ್ಷದ ಕಚೇರಿಯಲ್ಲಿ ಇರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next