Advertisement

ಎಚ್ಡಿಕೆ, ರಾಹುಲ್ ವಿರುದ್ಧ ಬಿಜೆಪಿ ಟ್ವೀಟ್‌

11:15 PM Jun 11, 2019 | Team Udayavani |

ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಆರೋಪದಡಿ ಬಂಧನದಲ್ಲಿರುವ ಪತ್ರಕರ್ತನ ಪರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಟ್ವೀಟ್‌ ಅನ್ನೇ ಉಲ್ಲೇಖೀಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಕರ್ನಾಟಕ ಟ್ವೀಟ್‌ ಮೂಲಕವೇ ತಿರುಗೇಟು ನೀಡಿದೆ.

Advertisement

ಉತ್ತರ ಪ್ರದೇಶದಲ್ಲಿ ಪತ್ರಕರ್ತನೊಬ್ಬನ ಬಂಧನಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ “ಒಂದು ವೇಳೆ ವಿರುದ್ಧ ಸುಳ್ಳು, ನಕಲಿ, ಕೆಟ್ಟ ಹಾಗೂ ಆರ್‌ಎಸ್‌ಎಸ್‌ ಪ್ರೇರಿತ ವರದಿಗಳನ್ನು ಬರೆಯುವ ಪತ್ರಕರ್ತನನ್ನು ಜೈಲಿಗೆ ಹಾಕಿದರೆ, ಬಹುತೇಕ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳು ತೀವ್ರವಾದ ಸಿಬ್ಬಂದಿ ಕೊರತೆ ಎದುರಿಸಲಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮೂರ್ಖರಂತೆ ವರ್ತಿಸುತ್ತಿದ್ದಾರೆ ಮತ್ತು ಆದಷ್ಟು ಬೇಗ ಪತ್ರಕರ್ತನನ್ನು ಬಿಡುಗಡೆ ಮಾಡಬೇಕು’ ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪತ್ರಿಯಾಗಿ ಬಿಜೆಪಿ ಕರ್ನಾಟಕ,”ಎಚ್‌.ಡಿ. ಕುಮಾರಸ್ವಾಮಿ ಅಣ್ಣನವರೆ, ನಿಮ್ಮ ಗೆಳೆಯ ರಾಹುಲ್‌ಗಾಂಧಿ ನಿಮ್ಮನ್ನು ಮೂರ್ಖ ಎಂದು ಭಾವಿಸಿದ್ದಾರೆ. ಏಕೆಂದರೆ, ನಿಮ್ಮ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಬ್ಲಾಗ್‌ ಗಳಲ್ಲಿ ಬರೆದಿರುವವರನ್ನು ಬಂಧಿಸಿದ್ದೀರಿ. ಆದರೆ, ರಾಹುಲ್‌ ಗಾಂಧಿಯವರು ನಿಮ್ಮ ಹೆಸರನ್ನು ಟ್ವೀಟ್‌ನಲ್ಲಿ ಉಲ್ಲೇಖೀಸಲು ಅಂಜಿದ್ದಾರೆ.

ಕರ್ನಾಟಕದಲ್ಲಿ ಮೈತ್ರಿ ಪತನವಾದರೆ, ಕಾಂಗ್ರೆಸ್‌ ಅಧಿಕಾರದಿಂದ ದೂರ ಇರಬೇಕಾಗುತ್ತದೆ ಎಂಬ ಆತಂಕದಿಂದ ಅವರು ನಿಮ್ಮ ಹೆಸರನ್ನು ಉಲ್ಲೇಖೀಸಿದಂತಿಲ್ಲ! ಈಗಲಾದರೂ ಅವರ ಮಾತನ್ನು ಆಲಿಸಿ ಎಂದು ಟ್ವೀಟ್‌ ಮಾಡಿದೆ. ನಂತರ ನೇರವಾಗಿ ರಾಹುಲ್‌ ಗಾಂಧಿಯವರ ವಿರುದ್ಧವೂ ಟ್ವೀಟ್‌ ಮಾಡಿರುವ ಬಿಜೆಪಿ ಕರ್ನಾಟಕ, “ನಿಮ್ಮ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಪತ್ರಕರ್ತರಿಗೆ ಕಿರುಕುಳ ಮತ್ತು ಬೆದರಿಕೆಯೊಡ್ಡುತ್ತಿದ್ದಾರೆ.

ಟಿಪ್ಪು ವಿರುದ್ಧ ಹೇಳಿಕೆ ನೀಡಿದ ಪತ್ರಕರ್ತ ಸಂತೋಷ್‌ ತಮ್ಮಯ್ಯ ಅವರನ್ನು ಬಂಧಿಸಲಾಗಿತ್ತು. ಮುಖ್ಯಮಂತ್ರಿಗಳ ಪುತ್ರನ ವರ್ತನೆ ಬಗ್ಗೆ ವರದಿ ಮಾಡಿದ ವಿಶ್ವೇಶ್ವರ ಭಟ್‌ ವಿರುದ್ಧ ಎಫ್ಐಆರ್‌ ದಾಖಲಿಸಿದರು. ಪೂರ್ವಾಗ್ರಹ ಪೀಡಿತ ವ್ಯಕ್ತಿ ಹೇಗಿರುತ್ತಾರೆ ಎಂಬುದಕ್ಕೆ ತಾವು ನೈಜ ಉದಾಹರಣೆಯಂತಿದ್ದೀರಿ’ ಎಂದು ವ್ಯಂಗ್ಯವಾಡಿದೆ.

Advertisement

ರಾಹುಲ್‌ ಗಾಂಧಿ ಅಸಮಾಧಾನ: “ಸುಳ್ಳು ಸುದ್ದಿಗಳನ್ನು ಹರಡುವ ಪತ್ರಕರ್ತರನ್ನೆಲ್ಲಾ ಬಂಧಿಸುವುದೇ ಆದರೆ, ನನ್ನ ವಿರುದ್ಧ ಅಪಪ್ರಚಾರ ಮಾಡುವ ಆರ್‌ಎಸ್‌ಎಸ್‌/ಬಿಜೆಪಿ ಪ್ರಾಯೋಜಿತ ಪತ್ರಕರ್ತರೆಲ್ಲರನ್ನೂ ಬಂಧಿಸಬೇಕಾಗುತ್ತದೆ. ಹಾಗಾದರೆ, ದೇಶದ ಬಹುತೇಕ ಎಲ್ಲಾ ಪತ್ರಿಕೆಗಳು ಹಾಗೂ ವಾಹಿನಿಗಳಲ್ಲಿ ಅಗಾಧವಾದ ಸಿಬ್ಬಂದಿ ಕೊರತೆ ಉಂಟಾಗಲಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಅವಹೇಳನಕಾರಿ ಟ್ವೀಟ್‌ ಮಾಡಿದ್ದ ಹಿನ್ನೆಲೆಯಲ್ಲಿ, ಪತ್ರಕರ್ತ ಪ್ರಶಾಂತ್‌ ಕನೋಜಿಯಾರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿರುವುದಕ್ಕೆ ಪ್ರತಿಯಾಗಿ ರಾಹುಲ್‌ ಈ ರೀತಿ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ, “ಪತ್ರಕರ್ತ ಪ್ರಶಾಂತ್‌ ಅವರ ವಿಚಾರದಲ್ಲಿ ಯೋಗಿ, ಮೂರ್ಖರಂತೆ ವರ್ತಿಸಿದ್ದಾರೆ. ಪ್ರಶಾಂತ್‌ ಹಾಗೂ ಅವರ ಜತೆ ಬಂಧಿಸಲ್ಪಟ್ಟಿರುವ ಇನ್ನಿಬ್ಬರು ಪತ್ರಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next