ಬೆಂಗಳೂರು: ಏರ್ ಸ್ಟ್ರೈಕ್ ವಿಜಯೋತ್ಸವದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಬಿಜೆಪಿ ಕರ್ನಾಟಕ ಸಹಿತವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ. ಗದ್ದರ್‌ಲಿಸ್ಟ್ ಎಂಬ ಟ್ಯಾಗ್‌ಲೈನ್ ಮೂಲಕ ಮುಖ್ಯಮಂತ್ರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆೆ.
ಪಾಕಿಸ್ತಾನದ ಉಗ್ರರನ್ನು ವಿಮಾನದಲ್ಲಿ ಹೋಗಿ ಬಾಂಬ್ ಸಿಡಿಸಿ ಬಂದಿರುವಂತೆ ರಸ್ತೆಯಲ್ಲಿ ನಿಂತು ಸಿಹಿ ಹಂಚಿ ವಿಜಯ ಪತಾಕೆ ಹಾರಿಸುವುದು ಮುಂದಿನ ದಿನಗಳಲ್ಲಿ ಎರಡು ಸಮಾಜದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟು, ಹಲವು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿಕೆ ನೀಡಿದ್ದರು. ಇದರ ವಿಡಿಯೋ ಸಮೇತವಾಗಿ ಬಿಜೆಪಿ ಮುಖಂಡರು ಟ್ವೀಟ್‌ನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
“ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನೀವು ಭಾರತದ ಒಂದು ರಾಜ್ಯದ ಮುಖ್ಯಮಂತ್ರಿಯೇ ಹೊರತು, ಪಾಕಿಸ್ತಾನದ ಮುಖ್ಯಮಂತ್ರಿಯಲ್ಲ. ಇದು ಮಹಾಘಟಬಂಧನ್‌ನ ದೇಶ ವಿರೋಧಿ ಮಾನಸಿಕತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರೀಟ್ವೀಟ್ ಮಾಡಿ, “ಬಿಜೆಪಿಗೆ ನಾಚಿಕೆಯಾಗಬೇಕು.
ವಿಡಿಯೋ ಎಡಿಟ್ ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಬಿಜೆಪಿ ನಾಯಕರು ತಾವೇ ದಾಳಿ ಮಾಡಿದ ಮಾದರಿಯಲ್ಲಿ ಸೇನೆ ಏನೂ ಮಾಡಿಲ್ಲ ಎಂದು ಬಿಂಬಿಸುತ್ತಿದ್ದೀರಿ’ ಎಂದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ ಕರ್ನಾಟಕ, “ಮಿಸ್‌ಲೀಡಿಂಗ್ ಮತ್ತು ಹೇಳಿಕೆ ನೀಡಿ ಓಡಿ ಹೋಗುವುದು ಸಿಎಂ ಕುಮಾರಸ್ವಾಮಿಯವರ ಸ್ಕಿಲ್. “ಪೂರ್ಣವಧಿ ನಿರ್ಮಾಪಕ ಹಾಗೂ ಅಲ್ಪಾವಧಿ ಮುಖ್ಯಮಂತ್ರಿಗೆ ಈ ಕೌಶಲ್ಯ ಕರಗತವಾಗಿದೆ’. ನೀವು ಆ ಹೇಳಿಕೆ ನೀಡಿಲ್ಲ ಎಂಬುದನ್ನು ಸಾಬೀತು ಮಾಡಿ ಎಂದು ಸವಾಲು ಎಸೆದಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿ, “ಮಾನ್ಯ ಕುಮಾರಸ್ವಾಮಿಯವರೇ, ಉಗ್ರಗಾಮಿಗಳು ಮತ್ತು ದೇಶಪ್ರೇಮಿಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ! ಉಗ್ರಗಾಮಿಗಳು ಸತ್ತರೆ ದೇಶದೊಳಗಡೆ ಶಾಂತಿ ಯಾಕೆ ಕದಡುತ್ತೆ? ನಿಮ್ಮ ಪ್ರಕಾರ ದೇಶದೊಳಗೆ ಉಗ್ರಗಾಮಿಗಳು ಇದ್ದಾರೆ ಅಂತಾಯ್ತು! ನಿಮಗೆ ಗೊತ್ತಿರೊ ಉಗ್ರಗಾಮಿಗಳನ್ನು ದಯವಿಟ್ಟು ಸೈನಿಕರಿಗೆ ಹಿಡಿದುಕೊಟ್ಟು ಪುಣ್ಯಕಟ್ಟಿಕೊಳ್ಳಿ’ ಎಂದು ಕಾಲೆಳೆದಿದ್ದಾರೆ.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, “ಇಂತಹ ಹೇಳಿಕೆ ನೀಡುವ ಮೂಲಕ ರಾಜಕಾರಣಿಗಳು ದೇಶದ ಭದ್ರತೆ ಹಾಗೂ ರಾಷ್ಟ್ರದ ಐಕ್ಯತೆಯನ್ನು ದುರ್ಬಲ ಮಾಡುತ್ತಿದ್ದಾರೆ’ ಎಂದು ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ, “ಇದು ಅತ್ಯುತ್ತಮ ಓಟ್‌ಬ್ಯಾಂಕ್ ರಾಜಕೀಯ. ಮೋದಿ ಸರ್ಕಾರವನ್ನು ದ್ವೇಷ ಮಾಡುವುದಕ್ಕಾಗಿ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡುವುದೇ?’ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟ್ವೀಟ್ ಮಾಡಿ, ಕಾಂಗ್ರೆಸ್‌ನ ಸಹವಾಸಕ್ಕೆ ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಚಿಂತನಾ ಶೈಲಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ನಮ್ಮ ದೇಶದ ಸುರಕ್ಷತೆಗಾಗಿ ತೆಗೆದುಕೊಳ್ಳಲಾದ ಕ್ರಮಗಳಲ್ಲೂ ಇವರಿಗೆ ಲೋಪ ಕಂಡುಬರುತ್ತಿದೆ. ನೀವು ರಾಜ್ಯದ ಮುಖ್ಯಮಂತ್ರಿನಾ ಅಥವಾ ಪಾಕಿಸ್ತಾನದ ರಾಯಭಾರಿಯಾ? ಎಂದು ಟಾಂಗ್ ನೀಡಿದ್ದಾರೆ.