ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತೆ ಆಕ್ರೋಶ ಹೊರ ಹಾಕಿದ್ದು, ಸುಳ್ಳು ಹೇಳುವುದಕ್ಕೆ ನೋಬೆಲ್ ಪಾರಿತೋಷಕ ಕೊಟ್ಟರೆ ಅದು ನಿಮಗೇ ಸಲ್ಲಬೇಕು. ಸುಳ್ಳೇ ನಿಮ್ಮ ಮನೆ ದೇವರಾ ? ಎಂದು ಪ್ರಶ್ನೆ ಮಾಡಿದೆ.ಸರಣಿ ಟ್ವೀಟ್ ಮೂಲಕ ಬಿಜೆಪಿ, ಸಿದ್ದರಾಮಯ್ಯ ಅವರ ದಲಿತ ಕಾಳಜಿಯನ್ನು ಪ್ರಶ್ನೆ ಮಾಡಿದೆ
‘ಸುಳ್ಳು ಹೇಳುವುದಕ್ಕಾಗಿ “ನೊಬೆಲ್ “ಪಾರಿತೋಷಕ ನೀಡುವುದಾದರೆ ಅದನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು.ಅವರಿವರಿಗೆ “ಗೊಬೆಲ್ಸ್ ಥಿಯರಿ” ಪ್ರತಿಪಾದಕರು ಎಂದು ನೀವು ಆರೋಪಿಸುತ್ತಿದ್ದಿರಿ. ಆದರೆ ನೀವೇ ಈಗ ದೊಡ್ಡ ಗೊಬೆಲ್ ಆಗಿದ್ದೀರಿ. ಸುಳ್ಳೇ ನಿಮ್ಮ ಮನೆ ದೇವರಾ? ಸಿದ್ದರಾಮಯ್ಯನವರೇ, ದಲಿತ ನಾಯಕತ್ವದ ವಿಚಾರದಲ್ಲಿ ನೀವು ಹೇಳಿದ ಸಂಗತಿಗಳನ್ನು ನೆನಪು ಮಾಡಿಕೊಡಬೇಕೇ? ನಾನೇ ದಲಿತ, ಮತ್ತೇಕೆ ದಲಿತ ಸಿಎಂ ಎಂದು ನೀವು ಹೇಳಿದ ಮಾತೇ ಅತಿದೊಡ್ಡ ಸುಳ್ಳು’ಎಂದಿದೆ.
‘ಆ ಸುಳ್ಳು ಹೇಳುತ್ತಲೇ ಕಾಂಗ್ರೆಸ್ ಪಕ್ಷದ ಎಲ್ಲಾ ದಲಿತ ನಾಯಕರನ್ನು ಮೂಲೆಗುಂಪು ಮಾಡಿಬಿಟ್ಟಿರಿ.ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್ ಅವರನ್ನು 2013 ರಲ್ಲಿ ಸೋಲಿಸಿದ್ದು ಯಾರು, ಸೋಲಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನೀವು ಕೊನೆಗೂ ಹೇಳಲೇ ಇಲ್ಲ’ ಎಂದು ಕಾಲೆಳೆದಿದೆ.
‘ನಮ್ಮ ಅಧ್ಯಕ್ಷರು ಸೋತು ಬಿಟ್ಟರು ಎಂದು ಹೇಳಿ ಕರುಣೆ ತೋರುವ ನಾಟಕವಾಡುತ್ತಾ, ಕಾಲ ಕಳೆದಿದ್ದು ನಿಜವಲ್ಲವೇ ? ದಲಿತರಿಗೆ ನೀಡಿದ ಕೊಡುಗೆಗಳ ಬಗ್ಗೆ #ಬುರುಡೆರಾಮಯ್ಯ ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಾರೆ. ಎಸ್ಇಪಿ, ಟಿಎಸ್‌ಪಿ ಹಣವನ್ನು ದಲಿತ ಫಲಾನುಭವಿಗಳಿಗೆ ತಲುಪಿಸಲೇ ಇಲ್ಲ. ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯದಲ್ಲಿ ” ಚೆಂಬು, ದಿಂಬು” ಖರೀದಿಗೆ ನಡೆದ ಭ್ರಷ್ಟಾಚಾರವನ್ನೂ ಸಹಿಸಿಕೊಂಡಿರಿ. ಹಾಗಾದರೆ ನಿಮ್ಮ ದಲಿತ ಕಾಳಜಿ ದೊಡ್ಡ ಸುಳ್ಳಲ್ಲವೇ ? ‘ಎಂದು ಪ್ರಶ್ನಿಸಿದೆ.
‘ದಲಿತರು ಮತಾಂತರವಾಗುತ್ತಿದ್ದಾಗ #ಬುರುಡೆರಾಮಯ್ಯ ಕಣ್ಣುಮುಚ್ಚಿ ಕುಳಿತಿದ್ದರು. ಮತಾಂತರ ದಲಿತರ ಭಾವನೆಗೆ ವಿರುದ್ಧವಾಗಿತ್ತು. ಆದರೆ ಅಧಿನಾಯಕಿ ಆಂಟೋನಿಯೋ ಮೈನೋ ಅವರ ಧಾರ್ಮಿಕ ಭಾವನೆಗೆ ಕುಂದು ಉಂಟಾಗಬಾರದೆಂಬ ಕಾರಣಕ್ಕೆ, ಕಾನೂನು ಬಾಹಿರವಾಗಿ ದಲಿತರನ್ನು ಮತಾಂತರ ಮಾಡುತ್ತಿಲ್ಲ ಎಂದಿರಿ.ನಿಮ್ಮ ಪ್ರತಿ ಮಾತೂ ಸುಳ್ಳು, ಸುಳ್ಳು, ಸುಳ್ಳು’ ಎಂದು ಟೀಕಿಸಿದೆ.