Advertisement

ಬಿಜೆಪಿಯತ್ತ ವಾಲಿದ ಬಿ.ಸಿ.ಪಾಟೀಲ, ಶಂಕರ್‌!

11:32 PM May 25, 2019 | Lakshmi GovindaRaj |

ಹಾವೇರಿ: ಲೋಕಸಭೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲುಂಟಾದ ಸಂಚಲನದಲ್ಲಿ ಜಿಲ್ಲೆಯ ಶಾಸಕದ್ವಯರ ಹೆಸರು ಥಳಕು ಹಾಕಿಕೊಂಡಿದೆ. ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲ ಅವರು ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ವಾಟ್ಸಪ್‌ ಮೂಲಕ ಕ್ಷೇತ್ರದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

Advertisement

ಇನ್ನು ಕೆಲ ಪ್ರಮುಖ ಮುಖಂಡರಿಗೆ ಸ್ವತ: ಕರೆ ಮಾಡಿ ಮುಂದೇನು ಮಾಡೋದು ಎಂಬ ಬಗ್ಗೆ ಸಲಹೆ ಪಡೆಯುತ್ತಿದ್ದಾರೆ. ಈವರೆಗೆ ಸಂಗ್ರಹಿಸಿದ ಅಭಿಪ್ರಾಯದಲ್ಲಿ ಹೆಚ್ಚಿನ ಜನರು ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರಾಗಿರುವ ತಮಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಸಚಿವ ಸ್ಥಾನ ಸಿಗದೆ ಇದ್ದಾಗ ಪಾಟೀಲರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಈಗ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಬಿಜೆಪಿಗೆ ಸೇರ್ಪಡೆಯಾಗುವ ಚಟುವಟಿಕೆ ಚುರುಕುಗೊಂಡಿದೆ ಎನ್ನುತ್ತಾರೆ ಬಿ.ಸಿ. ಪಾಟೀಲ ಆಪ್ತರು. ವಿಧಾನಸಭೆ ಚುನಾವಣೆಯ ಫಲಿತಾಂಶ ಅತಂತ್ರ ಬಂದಾಗಲೇ ಯಡಿಯೂರಪ್ಪ ಅವರು ಬಿ.ಸಿ.ಪಾಟೀಲ ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದರು.

ಆದರೆ, ಕಾಂಗ್ರೆಸ್‌ನಲ್ಲಿಯೇ ಮಂತ್ರಿಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿಂದ ಆಹ್ವಾನ ತಿರಸ್ಕರಿಸಿದ್ದರು. ಜತೆಗೆ ಬಿಜೆಪಿ ಆಹ್ವಾನ ನೀಡಿದ ಮಾತುಕತೆಯ ಆಡಿಯೋ ಬಿಡುಗಡೆ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಸ್ವ ಕ್ಷೇತ್ರದಲ್ಲಿ ಬಿಜೆಪಿಗೆ 22,943 ಲೀಡ್‌ ದೊರಕಿರುವುದರಿಂದ ಬಿ.ಸಿ.ಪಾಟೀಲ ಅವರ ಬಿಜೆಪಿ ಸೇರ್ಪಡೆ ವಿಚಾರ ಮತ್ತೆ ಗರಿಗೆದರಿದೆ.

Advertisement

ಶಂಕರ್‌ ನಡೆ ನಿಗೂಢ: ಈ ಮಧ್ಯೆ, ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದ ಕೆಪಿಜೆಪಿ ಶಾಸಕ ಆರ್‌. ಶಂಕರ್‌ ನಡೆ ಇನ್ನೂ ನಿಗೂಢವಾಗಿದೆ. ಅವರು ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಆರ್‌. ಶಂಕರ್‌ ಅವರು ತಮ್ಮ ರಾಜಕೀಯ ನಡೆಯ ಬಗ್ಗೆ ಸ್ವತಃ ಏನನ್ನೂ ನಿಖರವಾಗಿ ಹೇಳದೇ ಇದ್ದರೂ ಅವರ ಬೆಂಬಲವನ್ನು ಕಾಂಗ್ರೆಸ್‌ಗೆ ಪಡೆದುಕೊಳ್ಳಲೆಂದೇ ಸಿದ್ದರಾಮಯ್ಯನವರು ಅವರ ಮನವೊಲಿಸಲು ತಮ್ಮೊಂದಿಗೆ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಆದರೆ, ಆರ್‌. ಶಂಕರ್‌ ಇದನ್ನು ನಿರಾಕರಿಸಿದ್ದು, ತಮ್ಮ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೇನೆ. ಇದೇ ಸಂದರ್ಭದಲ್ಲಿ ದೆಹಲಿಗೆ ಸಿದ್ದರಾಮಯ್ಯ ಹೊರಟ್ಟಿದ್ದರಿಂದ ಒಟ್ಟಿಗೆ ಹೋಗಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌.ಶಂಕರ್‌ ಈ ಹಿಂದೆ ರಾಜ್ಯ ಸರ್ಕಾರ ರಚಿಸುವಾಗ ಬಿಜೆಪಿ ಆಡಳಿತ ನಡೆಸಬಹುದು ಎಂದು ಬೆಳಗ್ಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸಂಜೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗುತ್ತದೆ ಎಂಬುದು ತಿಳಿದಾಗ ಮೈತ್ರಿಗೆ ಬೆಂಬಲ ಸೂಚಿಸಿ, ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಸ್ಥಾನ ಕಿತ್ತುಕೊಂಡಾಗ ಮೈತ್ರಿ ಸರ್ಕಾರಕ್ಕೆ ತಾವು ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದರು.

ಕಾಂಗ್ರೆಸ್‌ನಿಂದ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಕಳೆದ 41 ವರ್ಷಗಳಿಂದ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಕ್ಷೇತ್ರದ ಜನ ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಾಯ ಮಾಡುತ್ತಿದ್ದು, ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಬಳಿಕ ಮತದಾರ ಪ್ರಭುಗಳ ತೀರ್ಮಾನಕ್ಕೆ ತಲೆಬಾಗುತ್ತೇನೆ.
-ಬಿ.ಸಿ.ಪಾಟೀಲ, ಹಿರೇಕೆರೂರ ಶಾಸಕ.

ಶಾಸಕ ಆರ್‌. ಶಂಕರ್‌ ಅವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದು, ಅದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ದೆಹಲಿಗೆ ಹೊರಟಿದ್ದರಿಂದ ಒಟ್ಟಿಗೆ ಹೋಗಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ವಿಚಾರವಿಲ್ಲ.
-ರಾಜು ಅಡಿವೆಪ್ಪನವರ, ಕೆಪಿಜೆಪಿ ಜಿಲ್ಲಾಧ್ಯಕ್ಷ.

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next