ಮುಂಬೈ: ಮಹಾರಾಷ್ಟ್ರದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಶಿವಸೇನೆಯನ್ನು ಗುಲಾಮರಂತೆ ನೋಡಲಾಗುತ್ತಿತ್ತು. ಅದಲ್ಲದೆ ಆ ಅವಧಿಯಲ್ಲಿ ಪಕ್ಷವನ್ನು ಮುಗಿಸಲು ಪ್ರಯತ್ನಗಳೂ ನಡೆದಿದ್ದವು ಎಂದು ಶಿವಸೇನೆ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾವತ್, ಈ ಹಿಂದಿನ ಸರ್ಕಾರದಲ್ಲಿ ನಾವು ಭಾಗವಾಗಿದ್ದೆವು. ನಮಗೆ ದ್ವಿತೀಯ ದರ್ಜೆ ಸ್ಥಾನಮಾನ ನೀಡಲಾಗಿತ್ತು. ಬಿಜೆಪಿಯವರು ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದರು. ಅಧಿಕಾರವನ್ನು ದುರಪಯೋಗ ಪಡಿಸಿಕೊಂಡು ಪಕ್ಷವನ್ನು ಅಂತ್ಯ ಮಾಡಲು ಪಯತ್ನಗಳೂ ನಡೆದಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುತ್ತೇವೆ; ತುಳುವಿನಲ್ಲಿ ಟ್ವೀಟ್ ಮಾಡಿದ ನಳಿನ್ ಕಟೀಲ್
ಶಿವಸೇನೆ ಅಧ್ಯಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ದೆಹಲಿಯಲ್ಲಿ ಭೇಟಿಯಾಗಿದ್ದರು. ಇದರ ಮರುದಿನ ಸಂಜಯ್ ರಾವತ್ ಅವರು ಬಿಜೆಪಿ ವಿರುದ್ಧ ಈ ಆರೋಪ ಮಾಡಿದ್ದಾರೆ.
ಬಿಜೆಪಿಯೊಂದಿಗೆ ಈ ಹಿಂದೆ ಸಖ್ಯ ಹೊಂದಿದ್ದ ಶಿವಸೇನೆ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಬೇರೆ ಬೇರೆಯಾಗಿದ್ದವು. ಮುಖ್ಯಮಂತ್ರಿ ಸ್ಥಾನದ ವಿಚಾರದ ಬಗ್ಗೆ ಭಿನ್ನಮತ ಉಂಟಾಗಿ, ಬಿಜೆಪಿ ಮೈತ್ರಿ ತೊರೆದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಕೈಜೋಡಿಸಿತ್ತು.