ವಿಧಾನಸಭೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಗೆಲ್ಲುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಜಗತ್ತು ಮೆಚ್ಚಿದ ಪ್ರಧಾನಿ ಮೋದಿ ಅವರೇ ಮತ್ತೂಮ್ಮೆ ಭಾರತದ ಪ್ರಧಾನಿ ಆಗಲಿದ್ದಾರೆ ಎಂದು ಬಿಜೆಪಿಯ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ದೇಶವನ್ನೇನೂ ಗೆದ್ದಿಲ್ಲ. 2024 ರ ಚುನಾವಣೆಯಲ್ಲಿ ದೇಶ ಗೆಲ್ಲುವುದು ಬಿಜೆಪಿಯೇ. ಜಗತ್ತು ಕಂಡ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೂಮ್ಮೆ ಪ್ರಧಾನಿ ಆಗುತ್ತಾರೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂದಂತೆ 5 ಸುಳ್ಳು ಹೇಳಿ ಬಂದ ಕಾಂಗ್ರೆಸ್ ಸರ್ಕಾರ, ಕೊಟ್ಟ ಭರವಸೆ ಈಡೇರಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರ ಇದ್ಧಾಗ ಜನಪರ ಆಡಳಿತ ನೀಡಿದೆ. ಕೋವಿಡ್‌ನಿಂದ ಜಗತ್ತು ತತ್ತರಿಸಿದ್ಧಾಗ ಪ್ರಧಾನಿ ಮೋದಿ ಅವರು ದೇಶದ ಜನರನ್ನು ಹೇಗೆ ಕಾಪಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಉಚಿತ ಲಸಿಕೆ ಕೊಟ್ಟು ಸಮಸ್ಯೆಯಿಂದ ಹೊರತಂದದ್ದನ್ನು ಇಡೀ ಜಗತ್ತು ಕೊಂಡಾಡುತ್ತಿದೆ. ಅಂದಿನ ಬಿಜೆಪಿ ಸರ್ಕಾರದ ಸಿಎಂ ಆಗಿದ್ದ ಯಡಿಯೂರಪ್ಪ ಅವರ ಬಗ್ಗೆ ಹೆಮ್ಮೆ ಇದೆ. ಶೇ.100 ರಷ್ಟು ಲಸಿಕೆ ಕೊಡುವ ಗುರಿ ಮುಟ್ಟಿದ ರಾಜ್ಯ ನಮ್ಮದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಸಾನ್ ಸಮ್ಮಾನ್ ಹಣ ಕಿತ್ತುಕೊಂಡ ಸರ್ಕಾರ: ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿ ಅಂಚಿಗೆ ಬಂದಿದ್ದವು. ಕಾಂಗ್ರೆಸ್ ಎಂಪಿಯೊಬ್ಬರ ಲ್ಯಾಂಕೋ ಇಫ್ರಾಟೆಕ್ ಸಂಸ್ಥೆಗೆ 26 ಸಾವಿರ ಕೋಟಿ ರೂ. ಸಾಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುತ್ತದೆ. ಅಸಲು, ಬಡ್ಡಿ ಪಾವತಿಸದಿದ್ದರೂ ಯುಪಿಎ ಸರ್ಕಾರದ ಅವಧಿಯಲ್ಲಿ ಮತ್ತೂಮ್ಮೆ 6 ಸಾವಿರ ಕೋಟಿ ರೂ. ಸಾಲ ಸಿಗುತ್ತದೆ. ಕಿಸಾನ್ ಸಮ್ಮಾನ್ ಅಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 6 ಸಾವಿರ ರೂ. ನೀಡಿದ್ದರೆ, ಯಡಿಯೂರಪ್ಪ ಅವರು ಸಿಎಂ ಇದ್ಧಾಗ 4 ಸಾವಿರ ರೂ. ನೀಡುತ್ತಿದ್ದರು. ಈಗಿನ ರಾಜ್ಯ ಸರ್ಕಾರ ಅದನ್ನೂ ಕೊಡುತ್ತಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ 3 ತಲೆಮಾರಿನ ದಾಖಲೆ ಕೇಳುತ್ತಿದ್ಧಾರೆ. ಎಲ್ಲಿಂದ ತಂದು ಕೊಡುವುದು? ಇದನ್ನು ರೈತಪರ ಸರ್ಕಾರ ಎಂದು ಹೇಗೆ ಕರೆಯುವುದು ಎಂದು ವಿಜಯೇಂದ್ರ ಪ್ರಶ್ನಿಸಿದರು.