Advertisement
ಅಮಿತ್ ಶಾ ರೋಡ್ ಶೋ ಕಾಲೇಜು ಸ್ಟ್ರೀಟ್ ಮೂಲಕ ಹಾದು ಹೋಗುತ್ತಿದ್ದಂತೆ, ಕಿಡಿಗೇಡಿಗಳು ಶಾ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಉಂಟಾದ ಘರ್ಷಣೆಯು ಬಳಿಕ ತೀವ್ರ ಸ್ವರೂಪ ಪಡೆಯಿತು. ಕೋಲ್ಕತಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಎಡಪಕ್ಷಗಳು ಮತ್ತು ಟಿಎಂಸಿ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ‘ಅಮಿತ್ ಶಾ ಗೋ ಬ್ಯಾಕ್’, ‘ಚೌಕಿದಾರ್ ಚೋರ್ ಹೇ’ ಎಂಬ ಘೋಷಣೆಗಳನ್ನು ಬರೆದಿದ್ದ ಫಲಕಗಳನ್ನು ಹಾಗೂ ಕಪ್ಪುಬಾವುಟಗಳನ್ನು ಹಿಡಿದು ನಿಂತಿದ್ದರು. ರೋಡ್ ಶೋ ಆ ದಾರಿಯಲ್ಲಿ ಸಾಗುತ್ತಿದ್ದಂತೆ ಅವರು ಘೋಷಣೆ ಕೂಗತೊಡಗಿದರು. ಇದಾದ ಬಳಿಕ ವಿದ್ಯಾಸಾಗರ ಕಾಲೇಜು ಹಾಗೂ ವಿವಿ ಹಾಸ್ಟೆಲ್ ಬಳಿ ಟಿಎಂಸಿ ಕಾರ್ಯಕರ್ತರು ಶಾ ಬೆಂಗಾವಲು ವಾಹನಗಳ ಮೇಲೆ ಏಕಾಏಕಿ ಕಲ್ಲುತೂರಾಟ ನಡೆಸಿದರು.
ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು, ಹಾಸ್ಟೆಲ್ ಗೇಟ್‌ಗೆ ಬೀಗ ಜಡಿದಿದ್ದಲ್ಲದೆ, ಹಾಸ್ಟೆಲ್ ಹೊರಗೆ ನಿಲ್ಲಿಸಲಾಗಿದ್ದ ಸೈಕಲ್ಗಳು, ಬೈಕುಗಳು ಹಾಗೂ ಇತರೆ ವಾಹನಗಳಿಗೆ ಬೆಂಕಿ ಹಚ್ಚಿದರು. ಜತೆಗೆ ಹಾಸ್ಟೆಲ್ ಕಟ್ಟಡದತ್ತ ಕಲ್ಲು ತೂರಿದರು. ಜತೆಗೆ, ಆವರಣದಲ್ಲಿದ್ದ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪುತ್ಥಳಿಯನ್ನೂ ಧ್ವಂಸಗೈದರು. ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಲಾಠಿ ಪ್ರಹಾರ ಮಾಡಿ ಅಲ್ಲಿದ್ದವರನ್ನು ಚದುರಿಸಿದರು. ಕೊನೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಯಶಸ್ವಿಯಾದರು. ಘರ್ಷಣೆ ವೇಳೆ ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆದೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾ ಶಕ್ತಿ ಪ್ರದರ್ಶನ
ಇದಕ್ಕೂ ಮುನ್ನ, ಕೊನೆಯ ಹಂತದ ಮತದಾನಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಲದಲ್ಲಿ ಶಕ್ತಿ ಪ್ರದರ್ಶನ ಕೈಗೊಂಡರು. ಕೇಂದ್ರ ಕೋಲ್ಕತಾದಿಂದ ಸಂಜೆ 4.30ಕ್ಕೆ ಆರಂಭವಾದ ರೋಡ್‌ಶೋ ಉತ್ತರ ಕೋಲ್ಕತಾದ ಸ್ವಾಮಿ ವಿವೇಕಾನಂದರ ನಿವಾಸದವರೆಗೆ ನಡೆಯಿತು. ರಾಜ್ಯದ ಸಂಸ್ಕೃತಿಯನ್ನು ಬಿಂಬಿಸು ವಂಥ ಸ್ತಬ್ಧ ಚಿತ್ರಗಳೂ ರ್ಯಾಲಿ ಯಲ್ಲಿ ಪ್ರಮುಖ ಆಕರ್ಷಣೆ ಯಾಗಿದ್ದವು. ರೋಡ್ ಶೋ ಆರಂಭಕ್ಕೂ ಮೊದಲು, ಬಿಜೆಪಿಯ ಬಾವುಟಗಳು ಹಾಗೂ ಪೋಸ್ಟರ್‌ಗಳನ್ನು ಟಿಎಂಸಿ ಕಾರ್ಯಕರ್ತರು ಕಿತ್ತೆಸೆದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನು ಖಂಡಿಸಿ ಪಕ್ಷದ ಪ್ರಧಾನ ಕಾರ್ಯ ದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಧರಣಿ ಕುಳಿತ ಘಟನೆಯೂ ನಡೆಯಿತು.
Related Articles
ಹಲವು ತಿಂಗಳ ಕಾಲ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಈಗ ಮೌನ ಮುರಿಯುತ್ತಲೇ ಹೊಸ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ ವ್ಯಕ್ತಿ’ ಎಂದು ಹೇಳಿ ವಿವಾದದ ಕೇಂದ್ರಬಿಂದುವಾಗಿದ್ದ ಅಯ್ಯರ್, ಮತ್ತೆ ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮತ್ತೂಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದ್ದಾರೆ.
Advertisement
ಮಂಗಳವಾರ ರೈಸಿಂಗ್ ಕಾಶ್ಮೀರ್ ಮತ್ತು ದಿ ಪ್ರಿಂಟ್‌ನಲ್ಲಿ ಅಯ್ಯರ್ ಬರೆದ ಲೇಖನ ಪ್ರಕಟವಾಗಿದೆ. ಅದರಲ್ಲಿ ಅಯ್ಯರ್, ಪ್ರಧಾನಿ ಮೋದಿ ಅವರೊಬ್ಬ ನೀಚ ವ್ಯಕ್ತಿ ಎಂದು ಪುನರುಚ್ಚರಿಸಿರುವುದು ಮಾತ್ರವಲ್ಲ, ಮೋದಿಯವರು ದೇಶ ಹಿಂದೆಂದೂ ಕಂಡರಿಯದ, ಮುಂದೆಯೂ ಕಾಣಲಸಾಧ್ಯವಾದ ‘ಹೊಲಸು ಬಾಯಿಯ ಪ್ರಧಾನಿ’ ಎಂದೂ ಜರೆದಿದ್ದಾರೆ. ಅಯ್ಯರ್ ಹೇಳಿಕೆ ಪ್ರಕಟವಾಗುತ್ತಲೇ ಕೆಂಡಾಮಂಡಲವಾಗಿರುವ ಬಿಜೆಪಿ, ತೀಕ್ಷ್ಣ ಮಾತುಗಳಿಂದ ಪ್ರತಿಕ್ರಿಯಿಸಿದೆ. ಅಯ್ಯರ್ ಒಬ್ಬ ಪ್ರಧಾನ ನಿಂದಕ ಎಂದು ಬಣ್ಣಿಸಿದ್ದಲ್ಲದೆ, ಅವರು ವಂಶಾಡಳಿತದ ಜೀತದಾಳು ಎಂದೂ ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿ, ‘ಅಯ್ಯರ್ ಹೇಳಿಕೆ ಯನ್ನು ನಾವು ಖಂಡಿಸುತ್ತೇವೆ. ಎಂಥ ರಾಜಕೀಯ ಶತ್ರುವಾಗಿದ್ದರೂ, ಅವರನ್ನು ಗೌರವಿಸಬೇಕು ಎಂಬುದನ್ನು ಸಂಸತ್‌ನಲ್ಲೇ ರಾಹುಲ್ಗಾಂಧಿಯವರು ತೋರಿಸಿ ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.
ಅಯ್ಯರ್ ವಂಶಾಡಳಿತದ ಜೀತದಾಳು: ಬಿಜೆಪಿಅಯ್ಯರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್, ‘ಅಂದು ನೀಚ ಪದ ಬಳಕೆಗಾಗಿ ಕ್ಷಮೆ ಕೇಳಿದ್ದ ಅಯ್ಯರ್, ಹಿಂದಿ ಭಾಷೆ ಬರುವುದಿಲ್ಲ ಎಂದು ನೆಪ ಹೇಳಿ ತಪ್ಪಿಸಿಕೊಂಡಿದ್ದರು. ಈಗ ಅವರು ಭವಿಷ್ಯವಾಣಿ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ವರ್ಷವಷ್ಟೇ ಅವರಿಗೆ ಹೇರಿದ್ದ ಉಚ್ಚಾಟನೆಯನ್ನು ಕಾಂಗ್ರೆಸ್ ವಾಪಸ್ ಪಡೆದಿದೆ. ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತು ದರ್ಪವು ಮತ್ತೆ ಜಗಜ್ಜಾಹೀರಾಗಿದೆ’ ಎಂದು ಹೇಳಿದ್ದಾರೆ. ಜತೆಗೆ, ಪಾಕ್ ಪ್ರೇಮಿ ಅಯ್ಯರ್‌ಗೆ ಪ್ರಧಾನಿ ಮೋದಿಯವರನ್ನು ದೇಶದ್ರೋಹಿ ಎಂದು ಕರೆಯಲು ಎಷ್ಟು ಧೈರ್ಯವಿರಬೇಕು? ನರೇಂದ್ರ ಮೋದಿ ಅವರು ರಾಷ್ಟ್ರಭಕ್ತಿಯ ತಿರುಳು ಇದ್ದಂತೆ. ಅಯ್ಯರ್ ಅವರು ಪರಿವಾರ ಭಕ್ತಿ ಹಾಗೂ ವಂಶಾಡಳಿತದ ಜೀತದಾಳು. ಎಲ್ಲ ನಿಂದಕರು ಕೂಡ ಗಾಂಧಿ ಕುಟುಂಬದ ಆಪ್ತರು ಎನ್ನುವುದರಲ್ಲಿ ಅಚ್ಚರಿಯೇನೂ ಇಲ್ಲ ಎಂದೂ ಟ್ವೀಟ್ ಮಾಡಿದ್ದಾರೆ.
ಭಗತ್‌ಸಿಂಗ್ ಪ್ರತಿಮೆ ಶುದ್ಧೀಕರಿಸಿದ ಸಿಕ್ಖರು
ಇಂದೋರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಅವರ ಪ್ರತಿಮೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಪುಷ್ಪನಮನ ಸಲ್ಲಿಸಿದ ಮಾರನೇ ದಿನವೇ ಸಿಕ್ಖ್ ಸಮುದಾಯದ ಸದಸ್ಯರು ಭಗತ್‌ಸಿಂಗ್ ಪ್ರತಿಮೆಯ ಶುದ್ಧೀಕರಣ ಪ್ರಕ್ರಿಯೆ ನಡೆಸಿದ್ದಾರೆ. ಪ್ರತಿಮೆಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅದನ್ನು ಶುದ್ಧಗೊಳಿಸಿದ ಸಿಕ್ಖರು, 1984ರ ಸಿಕ್ಖ್ ನರಮೇಧ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಆಡಿರುವ ಮಾತುಗಳನ್ನು ಖಂಡಿಸಿ ಪ್ರತಿಭಟನೆಯನ್ನೂ ಕೈಗೊಂಡರು.