Advertisement
ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ನಡೆದ ಅನಂತರ ಎದುರಿಸಿದ ಮೊದಲ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಕಟ್ಟಿ ಹಾಕಲಿದೆ ಎಂಬ ನಿರೀಕ್ಷೆಯನ್ನು ವರಿಷ್ಠರು ಹೊಂದಿದ್ದರು. ಆದರೆ ಯಾವುದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲವಾಗಿರುವುದು ವರಿಷ್ಠರ ಬೇಸರಕ್ಕೆ ಕಾರಣವಾಗಿದೆ. ಅಧಿವೇಶನದಲ್ಲಿ ಪ್ರತೀ ದಿನ ನಡೆದ ವಿದ್ಯಮಾನದ ಮಾಹಿತಿಯನ್ನು ದಿಲ್ಲಿಗೆ ಕಳುಹಿಸಲಾಗಿದ್ದು, ನಾಯಕತ್ವವಿಲ್ಲದೆ ಇದ್ದರೂ ವಿಧಾನ ಪರಿಷತ್ತಿನಲ್ಲೇ ಬಿಜೆಪಿ ಸದಸ್ಯರು ವಿಧಾನಸಭೆಗಿಂತ ಉತ್ತಮವಾಗಿ ಸರಕಾರವನ್ನು ಕಟ್ಟಿಹಾಕಿದ್ದರು ಎಂಬ ಮಾಹಿತಿ ಯನ್ನು ವರಿಷ್ಠರಿಗೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ ಈ ಅಧಿವೇಶನದಲ್ಲಿ “ನಾವು’ ಎಂಬ ಭಾವನೆಯಿಂದ ಪಕ್ಷದ ಯಾರೂ ಕೆಲಸ ಮಾಡಿಲ್ಲ.
ಪ್ರತಿಯೊಬ್ಬರೂ ವೈಯಕ್ತಿಕವಾಗಿ ಗಮನ ಸೆಳೆಯುವುದಕ್ಕೆ ಪೈಪೋಟಿ ನಡೆಸಿದರು. ಸಂಸದೀಯ ನಡಾವಳಿ ಪ್ರದರ್ಶನ ಯಾರಿಂದಲೂ ಆಗಲಿಲ್ಲ. ಸದನದ ನಿಯಮಾವಳಿಗಳಿಗೆ ಅನುಗುಣವಾಗಿ ವಿಷಯಗಳನ್ನು ಪ್ರಸ್ತಾವಿಸದೆ ಆಡಳಿತ ಪಕ್ಷ ಹಾಗೂ ಸ್ಪೀಕರ್ ಕಡೆಯಿಂದ ಮುಜುಗರ ಮಾಡಿಸಿಕೊಂಡರು. ಸಭಾತ್ಯಾಗ, ಧರಣಿ ವಿಚಾರದಲ್ಲಿ ಸಮನ್ವಯದಿಂದ ನಡೆದುಕೊಳ್ಳಲಿಲ್ಲ. ಪ್ರತಿದಿನ ಕಲಾಪ ಆರಂಭವಾಗುವುದಕ್ಕೆ ಮುನ್ನ ಶಾಸಕರ ಜತೆ ಸಭೆ ನಡೆಸುವ ಸಂಪ್ರದಾಯವನ್ನು ಅಶೋಕ್ ಹಾಗೂ ವಿಜಯೇಂದ್ರ ಪಾಲಿಸಲಿಲ್ಲ. ಕೊನೆಯ ವಾರ ನೆಪ ಮಾತ್ರಕ್ಕೆ ಸಭೆ ನಡೆಸಲಾಯಿತು. ಎಲ್ಲದ ಕ್ಕಿಂತ ಮುಖ್ಯವಾಗಿ ಮೈತ್ರಿ ಪಕ್ಷ ಜೆಡಿಎಸ್ ಈ ಅಧಿವೇಶನದಲ್ಲಿ ಯಾವುದೇ ರೀತಿಯ ಸಹಕಾರ ನೀಡಲಿಲ್ಲ. ಸದನದ ಹೊರಗೆ ಪ್ರಸ್ತಾವಿಸಿದ ವಿಷಯಗಳು ಕಲಾಪದಲ್ಲಿ ಚರ್ಚೆಯಾಗಲಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಕೇವಲ ಎರಡು ದಿನ ಕಲಾಪಕ್ಕೆ ಬಂದರು. ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ತೆರೆದ ಮನಸ್ಸಿನಿಂದ ಬಿಜೆಪಿ ಜತೆ ಕೈಜೋಡಿಸಲಿಲ್ಲ ಎಂಬ ಮಾಹಿತಿಯನ್ನು ವರಿಷ್ಠರಿಗೆ ರವಾನಿಸಲಾಗಿದೆ. ಈ ಎಲ್ಲ ದೂರುಗಳು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಚೇರಿಗೆ ರವಾನೆಯಾಗಿವೆ.
Related Articles
ಅಧಿವೇಶನದಲ್ಲಿ ಹತ್ತು ಅಜೆಂಡಾ ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ತಂತ್ರ ನಡೆಸಿತ್ತು. ಆದರೆ ಸದನದಲ್ಲಿ ಅವು ಸದ್ದು ಮಾಡಿಲ್ಲ. ಬದಲಾಗಿ ಅನಪೇಕ್ಷಿತ ವಿಚಾರಗಳಿಂದ ಬಿಜೆಪಿಯೇ ಸುದ್ದಿಯಾಗಿದೆ ಎಂದು ವರದಿ ಒಪ್ಪಿಸಲಾಗಿದೆ.
Advertisement
ದಿಲ್ಲಿಯಿಂದ ಬುಲಾವ್ ಈ ನಡುವೆ ರಾಜ್ಯ ನಾಯಕತ್ವದ ವಿರುದ್ಧ ಮಾತನಾಡುತ್ತಲೇ ಇರುವ ಕೆಲವು ನಾಯಕರಿಗೆ ವರಿಷ್ಠರು ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ವಾರಾಂತ್ಯದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆ ದಿಲ್ಲಿಯಲ್ಲಿ ರಾಜಿ ಸಂಧಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದಲ್ಲೇ ನಾವು ನಾಲ್ಕೈದು ಜನ ದಿಲ್ಲಿಗೆ
ಮೈಸೂರು: ವರಿಷ್ಠರ ಜತೆ ಮಾತಾಡಲು ಈಗ ಕಾಲ ಪಕ್ವವಾಗಿದೆ
ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿ. 20, 21, 22 ಈ ದಿನಾಂಕದೊಳಗೆ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಅವರ ಜತೆ ಎಲ್ಲ ವಿಷಯ ಚರ್ಚೆ ಮಾಡಿ, ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದೂ ಹೇಳಿದ್ದಾರೆ. ಸದನ ಹೋರಾಟದಲ್ಲಿ ಪಕ್ಷದ ನಾಯಕರು ವಿಫಲ
ವಿಜಯಪುರ: ಬೆಳಗಾವಿ ಅಧಿ ವೇಶನದಲ್ಲಿ ಜೋಡೆತ್ತುಗಳು ಸಮರ್ಥವಾಗಿ ಹೋರಾಟ ಮಾಡುವಲ್ಲಿ ವಿಫಲವಾದದ್ದರಿಂದ ನಾನು ಧ್ವನಿ ಎತ್ತಿದ್ದೆ. ಖಂಡನ ಹೇಳಿಕೆಗೆ ಸೀಮಿತವಾದ ವರ್ತನೆಯಿಂದ ಜೋಡೆತ್ತಿಗೆ ವರಿಷ್ಠರಿಂದ ಕರೆ ಬಂದಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಬಿಜೆಪಿ ಜೋಡೆತ್ತುಗಳಿಗಿಂತ ನಾನೇ ಹೆಚ್ಚು ಮಾತನಾಡಿ, ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂದು ತೋರಿಸಿದ್ದೇನೆ ಎಂದರು.