ಬೆಂಗಳೂರು: ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಯಿಂದ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕೋಲಿ ಸಮಾಜದ ಹಿರಿಯ ನಾಯಕರಾಗಿರುವ 71 ರ ಹರೆಯದ ಬಾಬೂರಾವ್ ಚಿಂಚನಸೂರ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜವಳಿ ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿದ್ದರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಕಲಬುರಗಿಯ ಗುರುಮಿಟ್ಕಲ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದ್ಕೂರು ಅವರ ಎದುರು 2018 ರ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ಆ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಹುಮತ ಲಭ್ಯವಿಲ್ಲದೇ ಇರುವುದರಿಂದ ಬಾಬೂರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೆ ಸೋಮವಾರ ಕೊನೆಯ ದಿನವಾಗಿದೆ.
ಬಿಜೆಪಿ ಯಿಂದ ಮೋಹನ್ ಲಿಂಬಿಕಾಯಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಎಸ್.ಪ್ರಕಾಶ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಅವರ ಹೆಸರೂ ಕೇಳಿ ಬಂದಿತ್ತು.