Advertisement

ಬಸವಕಲ್ಯಾಣ ಅಭ್ಯರ್ಥಿಯಾಗಲು ಬಿಜೆಪಿಗೆ ಟಿಕೆಟ್ ಆಕಾಂಕ್ಷಿಯಿಂದ ದೊಡ್ಡ ಮಟ್ಟದ ಹಣ ಸಂದಾಯ: HDK

12:58 PM Mar 25, 2021 | Team Udayavani |

ಕಲಬುರಗಿ: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಿಜೆಪಿ ಟಿಕೆಟ್ ಆಕಾಂಕ್ಷಿಯೋರ್ವ ನಾಯಕರಿಗೆ ದೊಡ್ಡ ಮಟ್ಟದ ಹಣ ಸಂದಾಯ ಮಾಡಿದ್ದಾರೆ‌. ಗಾಬರಿಯಾಗುವ ಮೊತ್ತವನ್ನು ಆ ಆಕಾಂಕ್ಷಿ ನೀಡಿದ್ದಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಸಂದಾಯವಾದ ಹಿನ್ನೆಲೆಯಲ್ಲಿ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ರಾಜ್ಯದ ಹಣ ಲೂಟಿ ಮಾಡಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ದೂರಿದರು.

ಬಿಜೆಪಿಯವರು ಯಾರನ್ನ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಬಸವಕಲ್ಯಾಣ ಜನಕ್ಕೆ ನಾನು ಮನವಿ ಮಾಡುತ್ತೇನೆ. ಈ ಕೆಟ್ಟ ಆಡಳಿತ ಸರ್ಕಾರವನ್ನು ಜನರು ತಿರಸ್ಕರಿಬೇಕು. ನಮ್ಮ ತೆರಿಗೆ ಹಣ ಜಿಎಸ್‌ಟಿ ಮೂಲಕ ಕೊಡುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ನಮಗೆ ಕೊಡುವ ಹಣದಲ್ಲಿ ಕಡಿತ ಮಾಡುತ್ತಿದೆ. ರಾಜ್ಯವನ್ನು ದಿವಾಳಿತನಕ್ಕೆ ಬಿಜೆಪಿ ಕರೆದುಕೊಂಡು ಹೋಗುತ್ತಿದೆ ಎಂದು ಹರಿಹಾಯ್ದರು‌.

ನಾವು ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಸದ್ಯ ಬಸವಕಲ್ಯಾಣ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಿಸಿದ್ದೇವೆ. ಸಿಂದಗಿ ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಬೇಕೋ, ಬೇಡವೋ ಎಂಬುದರ ಬಗ್ಗೆ ‌ಇನ್ನೂ ನಿರ್ಧರಿಸಿಲ್ಲ.‌ ಬಿಜೆಪಿ ಸೃಷ್ಟಿಸಿರುವ ಈ ಕೆಟ್ಟ ದಿನಗಳನ್ನು ಹೋಗಲಾಡಿಸಲು ನಾವು ಬಸವಕಲ್ಯಾಣ ಚುನಾವಣೆ ಮೂಲಕ ಹೋರಾಡುತ್ತೇವೆ ಎಂದರು.

Advertisement

ನಾನು ಹದಿನೈದು ದಿನಗಳ ಕಾಲ ಬಸವಕಲ್ಯಾಣದಲ್ಲಿ ಠಿಕಾಣಿ ಹೂಡಲಿದ್ದೇನೆ.‌ ಕ್ಷೇತ್ರದ ಪ್ರತಿಯೊಂದು ಮನೆಮನೆಗಳಿಗೆ ತೆರಳಿ ಜನರಿಗೆ ಕೆಟ್ಟ ಆಡಳಿತದ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಅಭಿಪ್ರಾಯ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಕಲಾಪಗಳಿಗೆ ಇತಿಶ್ರೀ ಹಾಡಿ ಮೊಟಕುಗೊಳಿಸಿದ್ದು ದುರಂತ.‌ ರಾಜ್ಯದ ಜನರ ಭಾವನೆಗಳು, ಸಮಸ್ಯೆಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಧಕ್ಕೆಯನ್ನುಂಟು ಮಾಡುತ್ತೀವೆ. ಕಲಾಪದಲ್ಲಿ ಕಾಂಗ್ರೆಸ್ -ಬಿಜೆಪಿ ಬಳಸುತ್ತಿರುವ ಪದಗಳು ಖಂಡನೀಯ ಎಂದು ಕಿಡಿಕಾಡಿದರು.

ಏಕಪತ್ನಿತ್ವ ವಿಷಯ ಹೇಳಿರುವ ಸಚಿವರಿಗೆ ಮಾನ ಮರ್ಯಾದೆ ಇದೆಯಾ?. ನೀವು ಆ ಕೆಲಸ ಮಾಡಿಲ್ಲ ಎಂದಮೇಲೆ ಕೋರ್ಟ್ ನಲ್ಲಿ ತಡೆಯಾಜ್ಞೆ ಅವಶ್ಯಕತೆ ಇತ್ತು?.‌‌ ಸಿಡಿ ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿ ಅಡಗಿದೆ.  ನಾವು ಹೊಡೆದಂಗೆ ಮಾಡುತ್ತೀವಿ, ನೀವು ಅತ್ತಂಗೆ ಮಾಡಿ ಎಂಬ ತಂತ್ರ ಇದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next