ಗದಗ: ರಾಜ್ಯದೆಲ್ಲೆಡೆ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಸಂಚಲನವುಂಟು ಮಾಡಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯ ಶಿರಹಟ್ಟಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ಅಭಿನವ ಹಾಲಶ್ರೀ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂಜಯ್ ಚವಡಾಳ ಅವರೇ ಅಭಿನವ ಹಾಲಶ್ರೀ ವಿರುದ್ಧ 1 ಕೋಟಿ ರೂ. ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸಂಜಯ್ ಚವಡಾಳ ಅವರು ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಶ್ರೀಗಳಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೂಲತಃ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ ಕರ್ತವ್ಯ ಲೋಪದಡಿ ಅಮಾನತ್ತುಗೊಂಡಿದ್ದು, ಪ್ರಸ್ತುತ ಮುಂಡರಗಿ ಪಟ್ಟಣದಲ್ಲಿ ವಾಸವಾಗಿದ್ದಾರೆ. ಸೆ. 19ರಂದು ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಹಾಲಶ್ರೀ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಸಂಜಯ್ ಚವಡಾಳ ಅವರು ಮೂರು ಹಂತದಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ದಾಖಲಿಸಿರುವ ಬಗ್ಗೆ ಮಾಹಿತಿಯಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಮುಂಡರಗಿ ಪೊಲೀಸರು ಕೇವಲ ಎನ್‌ಸಿ ದಾಖಲಿಸಿಕೊಂಡು ಸಮರ್ಪಕ ದಾಖಲೆ ಒದಗಿಸುವಂತೆ ಮುಂಡರಗಿ ಪೊಲೀಸರು ಸೂಚಿಸಿದ್ದಾರೆ. ಇತ್ತ ದೂರು ದಾಖಲಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಜಯ್ ಕಣ್ಮರೆಯಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಎಸ್‌ಪಿ ಬಿ.ಎಸ್. ನೇಮಗೌಡ ಪ್ರತಿಕ್ರಿಯೆ: ಎಂಎಲ್‌ಎ ಟಿಕೆಟ್‌ಗಾಗಿ ಹಣ ಪಡೆದು ವಂಚಿಸಿರುವ ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ದೂರು ದಾಖಲಾದ ಹಿನ್ನೆಲೆಯಲ್ಲಿ ದೂರು ನೀಡಿದ ಸಂಜಯ ಚವಡಾಳಗೆ ಗದಗ ಪೊಲೀಸರು ನೋಟಿಸ್ ನೀಡಿದ್ದು, ಹಣ ನೀಡಿದ ಬಗ್ಗೆ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್, ವಿವಿಧ ಹಂತದಲ್ಲಿ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ವಂಚನೆ ಕುರಿತಂತೆ ಸಮಂಜಸ ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಿದೇವೆ. ಇದುವರೆಗೂ ಯಾವುದೇ ದಾಖಲೆಯನ್ನು ದೂರುದಾರರು ಒದಗಿಸಿಲ್ಲ. ದಾಖಲೆಗಳನ್ನ ನೀಡಿದ ನಂತರ ಮುಂದಿನ ತನಿಖೆ ಆರಂಭಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.