Advertisement

ದೇಶದ ಒಕ್ಕೂಟ ವ್ಯವಸ್ಥೆ ಆಶಯಕ್ಕೆ ಬಿಜೆಪಿಯಿಂದ ಧಕ್ಕೆ; ಡಿ.ಕೆ. ಶಿವಕುಮಾರ

06:16 PM Mar 25, 2022 | Team Udayavani |

ಹೊಸಪೇಟೆ: ಬಿಜೆಪಿ ಸ್ವಾರ್ಥ ಸಾಧನೆಗಾಗಿ ದೇಶ ಇಬ್ಭಾಗ ಮಾಡುವ ಕೆಲಸ ಮಾಡುತ್ತಿದ್ದು, ಇದರಿಂದ ಒಕ್ಕೂಟ ವ್ಯವಸ್ಥೆ ಆಶಯಕ್ಕೆ ಧಕ್ಕೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

Advertisement

ನಗರದ ಮಲ್ಲಿಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದೂ ಮತಗಳ ಧ್ರುವೀಕರಣಕ್ಕೆ ಹುನ್ನಾರ ನಡೆದಿದೆ. ಇದರಿಂದ ದೀರ್ಘ‌ಕಾಲದಲ್ಲಿ ದೇಶದ ಜಾತ್ಯತೀತ ನಿಲುವಿಗೆ ಅಪಾಯ ಆಗಲಿದೆ. ಕಾಂಗ್ರೆಸ್‌ ಯಾವತ್ತೂ ರಾಮಾಯಣ, ಬೈಬಲ್‌, ಕುರಾನ್‌ ಮತ್ತು ಅಂಬೇಡ್ಕರ್‌ ಬರೆದಿರುವ ಸಂವಿಧಾನವನ್ನು ನಂಬುತ್ತದೆ. ಇವುಗಳ ತತ್ವ ಸಿದ್ಧಾಂತದ ಮೇಲೆ ಪಕ್ಷ ಮುನ್ನಡೆಯುತ್ತಿದೆ ಎಂದರು.

ಜಾತ್ರೆ, ದೇವಸ್ಥಾನಗಳಲ್ಲಿ ಇತರೆ ಧರ್ಮಿಯರಿಗೆ ವ್ಯಾಪಾರ, ವಹಿವಾಟಿಗೆ ನಿರ್ಬಂಧ ವಿಧಿ ಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ನಾಯಕರನ್ನು ಮೆಚ್ಚಿಸಲು ನೈತಿಕ ಪೊಲೀಸ್‌ಗಿರಿಯನ್ನು ತಡೆಯುತ್ತಿಲ್ಲ. ಇದರಿಂದ ಮುಂದೆ ರಾಜ್ಯಕ್ಕೆ ಅಪಾಯ ಉಂಟಾಗಲಿದೆ ಎಂದರು.ದೇಶದಲ್ಲಿ ಅಸಹಿಷ್ಣುತೆ ವಾತಾವರಣ ನಿರ್ಮಾಣವಾದ ಹಿನ್ನೆಲೆ ದೊಡ್ಡ ದೊಡ್ಡ ಬಂಡವಾಳಶಾಹಿಗಳು ಹೂಡಿಕೆಗೆ ಬರುತ್ತಿಲ್ಲ.ಇನ್ನೂ ಬಂಡವಾಳಶಾಹಿಗಳು ದೇಶದಿಂದ
ಕಾಲ್ಕಿಳುತ್ತಿದ್ದಾರೆ. ಈಗಾಗಲೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ.

ಅಗತ್ಯವಸ್ತುಗಳ ಬೆಲೆ ಏರಿಕೆ, ತೈಲ ಬೆಲೆ, ಅಡುಗೆ ಸಿಲಿಂಡರ್‌ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದರು. ಕಲ್ಯಾಣ ಕರ್ನಾಟಕದಲ್ಲಿ ಡಿಜಿಟಲ್‌ ಸದಸ್ಯತ್ವ ಅಭಿಯಾನ ನೋಂದಣಿ ಕಾರ್ಯ ಭರದಿಂದ ನಡೆದಿದೆ. ತೆಲಂಗಾಣದಲ್ಲಿ 40 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ 28 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಇನ್ನಷ್ಟು ಗುರಿ ನೀಡಲಾಗಿದ್ದು, ಎಲ್ಲರೂ ಕೂಡಿ ನೋಂದಣಿ ಕಾರ್ಯ ಮಾಡುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಧಾನಸಭೆ ಚುನಾವಣೆಗೂ ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದರು. ಈ ಬಾರಿ ವಿಧಾನಸಭೆ ಚುನಾವಣೆಗೆ ಹೊಸಬರಿಗೆ ಟಿಕೆಟ್‌ ನೀಡಲಾಗುವುದು. ಜತೆಗೆ ಸ್ಥಳೀಯವಾಗಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು, ಎಲ್ಲ ಮುಂಚೂಣಿ ಘಟಕಗಳ ಬಲವರ್ಧನೆಗೆ
ಕ್ರಮವಹಿಸಲಾಗುತ್ತಿದೆ. ಕೇಡರ್‌ ಪಾರ್ಟಿ ಮಾಡಲೂ ಒತ್ತು ನೀಡಲಾಗಿದೆ ಎಂದರು.

Advertisement

ಶಾಸಕರಾದ ಬಿ. ನಾಗೇಂದ್ರ, ಭೀಮಾನಾಯ್ಕ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಮಾಜಿ ಶಾಸಕ ಸಿರಾಜ್‌ ಶೇಕ್‌, ಮುಖಂಡರಾದ ಬಿ.ವಿ. ಶಿವಯೋಗಿ, ರಫೀಕ್‌, ವೆಂಕಟರಾವ್‌ ಘೋರ್ಪಡೆ, ಗುಜ್ಜಲ ರಘು, ದೀಪಕ್‌ ಸಿಂಗ್‌, ಜಲಜಾ ನಾಯ್ಕ, ರಾಜಶೇಖರ್‌ ಹಿಟ್ನಾಳ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next