Advertisement

ಬಿಜೆಪಿ 20 ಟ್ವೆಂಟಿ ಕೈಗೆ ಕೋಟಿ ಗುರಿ

06:00 AM Sep 17, 2018 | Team Udayavani |

ನವದೆಹಲಿ: 2014ರ ಲೋಕಸಭೆ ಚುನಾವಣೆಯ ವೇಳೆ ಚಾಯ್‌ ಪೆ ಚರ್ಚಾ ಕ್ಯಾಂಪೇನ್‌ ಯಶಸ್ವಿಯಾದ ಬೆನ್ನಲ್ಲೇ 2019ರ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಟಿ20 ಸೂತ್ರವನ್ನು ಹೆಣೆದಿದೆ. ಹಾಗಂತ ಟಿ20 ಕ್ರಿಕೆಟ್‌ ಪಂದ್ಯಕ್ಕೂ ಬಿಜೆಪಿಯ ಸೂತ್ರಕ್ಕೂ ಸಂಬಂಧವಿಲ್ಲ. ಆದರೆ “ಟಿ’ ಎಂಬುದು ಇಲ್ಲಿ ಚಹಾವನ್ನು ಸೂಚಿಸುತ್ತದೆ. ಪ್ರತಿ ಮತಗಟ್ಟೆಯಲ್ಲೂ ಒಬ್ಬೊಬ್ಬ ಕಾರ್ಯಕರ್ತ 20 ಮನೆಗಳಿಗೆ ಭೇಟಿ ನೀಡಿ, ಮನೆಯ ಸದಸ್ಯರೊಂದಿಗೆ ಚಹಾ ಕುಡಿಯುತ್ತಾ, ಪ್ರಧಾನಿ ಮೋದಿ ಸರ್ಕಾರದ ಸಾಧನೆ ಹಾಗೂ ಸವಲತ್ತುಗಳ ಬಗ್ಗೆ ವಿವರಣೆ ನೀಡಬೇಕು ಹಾಗೂ ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂಬುದೇ ಈ ಟಿ20 ಸೂತ್ರ!

Advertisement

ಅಲ್ಲದೆ ಹರ್‌ ಬೂತ್‌ ದಸ್‌ ಯೂತ್‌ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಮನೆಯನ್ನೂ ಬಿಜೆಪಿ ಕಾರ್ಯಕರ್ತರು ತಲುಪಲಿದ್ದಾರೆ. ಜನರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಇದಾಗಿದ್ದು, ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುವಂತೆ ಸಂಸದರು, ಶಾಸಕರು, ಸ್ಥಳೀಯ ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರವರೆಗೂ ಸಂದೇಶವನ್ನು ರವಾನಿಸಲಾಗಿದೆ.

ಹೊಸ ನಮೋ ಆ್ಯಪ್‌: ಮೂಲಗಳ ಪ್ರಕಾರ ನಮೋ ಆ್ಯಪ್‌ ಚುನಾವಣೆ ಸಮಯದಲ್ಲಿ ಮಹತ್ವ ಪಡೆಯಲಿದೆ. ಮುಂದಿನ ವಾರದಲ್ಲೇ ನಮೋ ಆ್ಯಪ್‌ ಹೊಸ ರೂಪದಲ್ಲಿ ಬಿಡುಗಡೆಯಾಗಲಿದ್ದು, ಇದರಲ್ಲಿ ಕಾರ್ಯಕರ್ತರನ್ನು ತಲುಪುವುದಕ್ಕಾಗಿ ಇನ್ನಷ್ಟು ವಿಭಾಗಗಳನ್ನು ಮಾಡಲಾಗುತ್ತದೆ. ಹೆಚ್ಚು ಹೆಚ್ಚು ಜನರು ನಮೋ ಆ್ಯಪ್‌ಗೆ ನೋಂದಣಿ ಮಾಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಕಾರ್ಯಕರ್ತರಿಗಾಗಿ ವಿವಿಧ ಅಸೈನ್‌ಮೆಂಟ್‌ಗಳನ್ನೂ ನಿಗದಿಸಲಾಗುತ್ತದೆ. ಇನ್ನಷ್ಟು ಜನರನ್ನು ಸೇರಿಸುವುದು ಹೇಗೆ ಎಂಬ ಬಗ್ಗೆ ವಿವರಗಳು, ಪಠ್ಯ, ವಿಡಿಯೋ ಹಾಗೂ ಗ್ರಾಫಿಕ್ಸ್‌ ಕೂಡ ಇದರಲ್ಲಿ ಇರಲಿದೆ.

ಪ್ರತಿ ಬೂತ್‌ನಲ್ಲೂ 100 ಜನರನ್ನು ನಮೋ ಆ್ಯಪ್‌ಗೆ ಸೇರಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಪಕ್ಷಕ್ಕೆ ಪ್ರತಿ ಬೂತ್‌ನಲ್ಲೂ 20 ಹೊಸ ಸದಸ್ಯರನ್ನು ನೇಮಿಸಲಾಗುತ್ತದೆ. ಎಲ್ಲ ಸಮುದಾಯದ ಜನರನ್ನೂ ಪಕ್ಷದ ವ್ಯಾಪ್ತಿಗೆ ತರಲು ಯತ್ನಿಸಲಾಗುತ್ತಿದೆ.

20ಕ್ಕೂ ಹೆಚ್ಚು ಕಾರ್ಯಕರ್ತರು: ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸುವುದರ ಜೊತೆಗೆ, ವಿಪಕ್ಷಗಳು ಬಿಜೆಪಿ ವಿರುದ್ಧ ಮಾಡುತ್ತಿರುವ ಅಪಪ್ರಚಾರ ತಡೆಯುವುದಕ್ಕಾಗಿ ಪ್ರತಿ ಬೂತ್‌ನಲ್ಲೂ 20ಕ್ಕೂ ಹೆಚ್ಚು ಕಾರ್ಯಕರ್ತರ ತಂಡ ರಚಿಸಲಾಗಿದೆ. ಇವರು ವಿಪಕ್ಷಗಳು ಮಾಡುತ್ತಿರುವ ಆರೋಪ ಸುಳ್ಳು ಎಂದು ವಾಸ್ತವಾಂಶಗಳು ಮತ್ತು ದತ್ತಾಂಶಗಳನ್ನು ಆಧರಿಸಿ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಈ ಕಾರ್ಯಕ್ರಮ ವಿವಿಧ ಹಂತಗಳಲ್ಲಿ ನಡೆಯಲಿದೆ.

Advertisement

ಕೋಟಿ ಮತಗಟ್ಟೆ ಸಹಾಯಕರು
ಕಾಂಗ್ರೆಸ್‌ 1 ಕೋಟಿ ಮತಗಟ್ಟೆ ಸಹಾಯಕರನ್ನು ನೇಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಈ ಸಂಬಂಧ ಎಲ್ಲ ರಾಜ್ಯಗಳ ಪಕ್ಷದ ಅಧ್ಯಕ್ಷರಿಗೆ ಕಾಂಗ್ರೆಸ್‌ ಮುಖಂಡ ಅಶೋಕ್‌ ಗೆಹೊÉàಟ್‌ ಪತ್ರ ಬರೆದಿದ್ದಾರೆ.  ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಸಹಾಯಕರನ್ನು ನೇಮಿಸಬೇಕು ಮತ್ತು ಪ್ರತಿ ಸಹಾಯಕರು 20-25 ಮನೆಗಳಿಗೆ ಭೇಟಿ ನೀಡಬೇಕು ಎಂದು ವಿವರಿಸಲಾಗಿದೆ. ಪ್ರತಿ ರಾಜ್ಯದಲ್ಲೂ ಕಾಂಗ್ರೆಸ್‌ ಡಿಜಿಟಲ್‌ ವಾರ್‌ ರೂಮ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನು ಪ್ರತಿ ಜಿಲ್ಲೆಯಲ್ಲೂ ವಾರ್‌ ರೂಮ್‌ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದ ವಿಭಾಗದ ಮುಖ್ಯಸ್ಥೆ ರಮ್ಯಾ ಹೇಳಿದ್ದಾರೆ. ಕಳೆದ ವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಕ್ಷ ಸಂವಹನ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯ ಆಗ್ರಹಿಸಿ ಟ್ವೀಟ್‌ ಮಾಡಿದ್ದರು. ಜನರಿಗೆ ಪ್ರತ್ಯೇಕ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನೂ ಪಕ್ಷ ನೀಡಿದೆ.

12 ಲಕ್ಷ ಸದಸ್ಯರ ತಂಡ:
2014ರ ಚುನಾವಣೆಯಲ್ಲಿ ಡಿಜಿಟಲ್‌ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ ಎಲ್ಲ ಪಕ್ಷಗಳಿಗಿಂತಲೂ ಮುಂದಿದೆ. ಸದ್ಯ ಅಂದಾಜು 12 ಲಕ್ಷ ಕಾರ್ಯಕರ್ತರನ್ನು ಬಿಜೆಪಿ ಹೊಂದಿದ್ದು, ನಿರಂತರವಾಗಿ ಹೊಸ ಹೊಸ ಕಾರ್ಯಕರ್ತರನ್ನು ಪಕ್ಷ ನೇಮಿಸಿಕೊಳ್ಳುತ್ತಿದೆ ಎಂದು ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ಉಸ್ತುವಾರಿ ಅಮಿತ್‌ ಮಾಳವೀಯ ಹೇಳಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಆ್ಯಪ್‌ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ಸಾಧ್ಯವಾದಷ್ಟೂ ಹೆಚ್ಚು ಲೋಕಸಭೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲಿದ್ದಾರೆ. ಈಗಾಗಲೇ ಅಧಿಕಾರ ವಹಿಸಿಕೊಂಡಾಗಿನಿಮದ 300ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಿಗೆ ಮೋದಿ ಭೇಟಿ ನೀಡಿದ್ದು, ಕೆಲವೇ ದಿನಗಳ ಹಿಂದೆ ಐದು ಲೋಕಸಭೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಆ್ಯಪ್‌ ಮೂಲಕ ಸಂವಾದ ನಡೆಸಿದ್ದರು.

ಡಿಜಿಟಲ್‌ ಆದ ಸಿಪಿಎಂ:
ಕೇರಳ, ಪ.ಬಂಗಾಳ, ತ್ರಿಪುರಾ ಹಾಗೂ ತಮಿಳುನಾಡಿನಲ್ಲಿ ಪ್ರತ್ಯೇಕ ತಂಡವನ್ನು ಹೊಂದಿರುವ ಸಿಪಿಎಂ ಕೂಡ ಡಿಜಿಟಲ್‌ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಇದೇ ಮೊದಲ ಬಾರಿ ಕಾಲಿಟ್ಟಿದೆ. ಸಾಮಾನ್ಯವಾಗಿ ಸಾಂಪ್ರದಾಯಿಕ ವಿಧಾನದಲ್ಲೇ ಪ್ರಚಾರ ಹಾಗೂ ಚುನಾವಣೆ ತಂತ್ರ ರೂಪಿಸುತ್ತಿದ್ದ ಸಿಪಿಎಂ ಟ್ವಿಟರ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಚಟುವಟಿಕೆಯನ್ನು ಹೆಚ್ಚಿಸಿದೆ.

ಡೇಟಾ ಅನಾಲಿಟಿಕ್ಸ್‌ ಬಗ್ಗೆ ಹೆಚ್ಚಿನ ಗಮನ:
ಮತದಾರರು ಯಾವ ರೀತಿ ಚಿಂತನೆ ನಡೆಸಿದ್ದಾರೆ ಹಾಗೂ ಯಾವ ಪಕ್ಷದ ಪರ ಒಲವು ಹೊಂದಿದ್ದಾರೆ ಎಂಬುದನ್ನು ಅಳೆಯಲು ಡೇಟಾ ಅನಾಲಿಟಿಕ್ಸ್‌ಗೆ ಪಕ್ಷಗಳು ಮೊರೆ ಹೋಗಿವೆ. ಚೀನಾ ನಂತರದಲ್ಲಿ ಭಾರತ ಅತ್ಯಂತ ಹೆಚ್ಚು ಇಂಟರ್ನೆಟ್‌ ಬಳಕೆದಾರರನ್ನು ಹೊಂದಿದ್ದು, ಸಾಮಾಜಿಕ ಮಾಧ್ಯಮ ಹಾಗೂ ಇತರ ಡಿಜಿಟಲ್‌ ಸ್ಪೇಸ್‌ನಲ್ಲಿ ಜನರು ಹಂಚಿಕೊಳ್ಳುವ ಅಭಿಪ್ರಾಯವನ್ನು ಆಧರಿಸಿ ಡೇಟಾ ಉತ್ಪಾದಿಸಲಾಗುತ್ತದೆ. ಈ ಡೇಟಾ ವಿಶ್ಲೇಷಣೆ ನಡೆಸುವುದು ಚುನಾವಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಸಿಐಎಸ್‌ಎಫ್ಗೆ ಹೊಸ ಶಸ್ತ್ರಾಸ್ತ್ರ: 2019ರ ಲೋಕಸಭೆ ಚುನಾವಣೆಯ ವೇಳೆ ಗಣ್ಯರಿಗೆ ಭದ್ರತೆ ಒದಗಿಸುವ ಸಿಐಎಸ್‌ಎಫ್ಗೆ ಹೊಸ ಶಸ್ತ್ರಾಸ್ತ್ರಗಳು ಲಭ್ಯವಾಗಲಿವೆ. ಹಳೆಯ ಎಕೆ 47, ಕಾರ್ಬೈನ್‌ ಗನ್‌ಗಳ ಬದಲಿಗೆ ಎಕ್ಸ್‌ 95 ಅಸಾಲ್ಟ್ ರೈಫ‌ಲ್‌ಗ‌ಳನ್ನು ಖರೀದಿಸಲು ನಿರ್ಧರಿಸಲಾಗಿದೆ. 500 ಎಕ್ಸ್‌ 95 ರೈಫ‌ಲ್‌ ಖರೀದಿಗೆ ಆದೇಶಿಸಲಾಗಿದ್ದು, ಲೇಸರ್‌ ಪಾಯಿಂಟೆಡ್‌ ಪಿಸ್ತೂಲುಗಳನ್ನೂ ಖರೀದಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next