Advertisement

ಕಲ್ಯಾಣ ಕರ್ನಾಟಕದ ಕಾಂಗ್ರೆಸ್‌ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು

08:07 PM Jul 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯು ಮಿಷನ್‌ 150 ಮಂತ್ರ ಜಪಿಸುತ್ತಿದ್ದು, ಅದನ್ನು ಸಾಕಾರಗೊಳಿಸಲು ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳ ಮೇಲೆ ಕಣ್ಣು ಹಾಕಿದೆ.

Advertisement

ರಾಜ್ಯದಲ್ಲಿ ಕಿತ್ತೂರು ಕರ್ನಾಟಕ, ಕರಾವಳಿ ಹಾಗೂ ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದು ಈಚೆಗೆ ನಡೆದ ಚಿಂತನ ಸಭೆಯಲ್ಲಿ ಚರ್ಚೆಯಾಗಿದೆ.

ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳೇ ಗುರಿ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ತಳ ಮಟ್ಟದಿಂದಲೇ ಬಲಗೊಳಿಸಲು ಪ್ರಮುಖ ನಾಯಕರೊಬ್ಬರಿಗೆ ಹೊಣೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ. ಆ ಭಾಗದಲ್ಲಿ ಪ್ರಬಲವಾಗಿರುವ ಕಾಂಗ್ರೆಸ್‌ 21 ಶಾಸಕರನ್ನು ಹೊಂದಿದ್ದು, ಅದೇ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪಕ್ಷ ಸಂಘಟನೆಗೆ  ನಿರ್ಧರಿಸಲಾಗಿದೆ ಎನ್ನಲಾಗಿದೆ.  ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಕನಿಷ್ಠ 3 ದಿನ ವಾಸ್ತವ್ಯವಿದ್ದು ಅಲ್ಲಿ ಪಕ್ಷದ ಸ್ಥಿತಿ, ಕ್ಷೇತ್ರ ಹಾಗೂ ನಾಯಕತ್ವದ ಸಮಸ್ಯೆ,  ಮೋರ್ಚಾಗಳ ನಡುವೆ ಹೊಂದಾಣಿಕೆ, ಬೂತ್‌ ಮಟ್ಟದ ಕಾರ್ಯಕರ್ತರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳುವ ಕುರಿತಂತೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ಬಳಿಕ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಹಾಗೂ ಚುನಾವಣ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸರಕಾರದ ಕೊಡುಗೆ ಜಾಗೃತಿ :

Advertisement

ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ನೀಡಿರುವ ಕೊಡುಗೆಗಳನ್ನು ಜನರಿಗೆ  ತಲುಪಿಸುವ ಕೆಲಸ ಮಾಡಲು ನಿರ್ಧರಿಸಲಾಗಿದೆ. ಹೈದರಾಬಾದ್‌ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ, ದಾಸ್ಯದ ಸಂಕೋಲೆಯ ಭಾವನೆಯಿಂದ ಆ ಭಾಗದ ಜನರನ್ನು ಬಿಜೆಪಿ ಸರಕಾರ ಹೊರ ತಂದಿದೆ. ಜತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈ ಬಗ್ಗೆ ಆ ಭಾಗದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಕಲ್ಯಾಣ ಕರ್ನಾಟಕದ ಕ್ಷೇತ್ರಗಳು: 40

ಪ್ರಸ್ತುತ ಬಿಜೆಪಿ ಶಾಸಕರ ಸಂಖ್ಯೆ: 17

ಮುಂದಿನ ಗುರಿ ದುಪ್ಪಟ್ಟು

ಜಿಲ್ಲಾವಾರು ಬಿಜೆಪಿ ಶಾಸಕರು:

ಬೀದರ್‌- 2, ಯಾದಗಿರಿ- 2 , ರಾಯಚೂರು- 2, ಬಳ್ಳಾರಿ- 2 ವಿಜಯನಗರ-2 ಕಲಬುರಗಿ-4 ಕೊಪ್ಪಳ-3 ಶಾಸಕರು.

ಕನಿಷ್ಠ 30 ಸ್ಥಾನ ಗೆಲ್ಲಲು ಕಾರ್ಯತಂತ್ರ:

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು,  2023ರ ವಿಧಾನಸಭೆ ಚುನಾವಣೆಯಲ್ಲಿ ಏಳು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕನಿಷ್ಠ 30 ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next