ಕಲಬುರಗಿ: ರಾಜ್ಯದ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಸುಟ್ಟು ಪ್ರತಿಭಟನೆ
ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ಬಿ.ಆರ್.ಪಾಟೀಲ ಕೇಂದ್ರದ ಬಿಜೆಪಿ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ದಾಳಿ ರಾಜಕೀಯ ಪ್ರೇರಿತ. ಗುಜರಾತ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿಸುವುದರಲ್ಲಿ ತೊಡಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಅಲ್ಲಿನ ಕಾಂಗ್ರೆಸ್ ಶಾಸಕರು ಬೆಂಗಳೂರು ಬಳಿಯ ರೆಸಾರ್ಟ್‌ಗೆ ಬಂದಿದ್ದರು. ಅವರ ಯೋಗಕ್ಷೇಮದ ಉಸ್ತುವಾರಿ ವಹಿಸಿದ್ದ ಸಚಿವ ಡಿಕೆಶಿಯವರ ಮೇಲೆ ರಾಜಕೀಯ ಹಗೆತನದಿಂದ ಈ ದಾಳಿಯನ್ನು ಕೇಂದ್ರ ಸರ್ಕಾರ ಆದಾಯ ತೆರಿಗೆ ಮೂಲಕ ನಡೆಸಿದೆ ಎಂದರು.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕೇವಲ ಆದಾಯ ತೆರಿಯ ಇಲಾಖೆ ಅಷ್ಟೇ ಅಲ್ಲ, ಸಿಬಿಐ ಸೇರಿದಂತೆ ಕೇಂದ್ರದ ಎಲ್ಲ ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಇಂತಹ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿದರು. ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಶರಣುಗೌಡ ಪಾಟೀಲ, ಹಣಮಂತರಾವ್ ಭೂಸನೂರ, ಬಿ.ಕೆ. ಪಾಟೀಲ, ಶ್ರೀಶೈಲ ಹತ್ತರಕಿ, ಗುರುಲಿಂಗಪ್ಪ ತಾಂಬಾ, ರಾಜು ಜವಳಿ, ವಕೀಲ ಕೋರೆ, ಸಂಜು ಕೊಬ್ರಾ, ಜಗನ್ನಾಥ ಗೋಧಿ, ಶಾಮ ನಾಟೀಕಾರ, ಶಿವಶರಣಪ್ಪ ಕೋಬಾಳ ಹಾಗೂ ಇತರರಿದ್ದರು.
ವಿಪಕ್ಷಗಳನ್ನು ಹೆದರಿಸಿ-ಬೆದರಿಸುವ ಕುತಂತ್ರ: ಆರೋಪ ಆಳಂದ: ರಾಜ್ಯದ ಇಂಧನ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವುಕುಮಾರ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ನಡೆಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರಾಜಕೀಯವಾಗಿ ಸೇಡು ತಿರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ ನಿಲ್ದಾಣ ಮುಂದೆ ಬುಧವಾರ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಿಸಾನ್ ಘಟಕದ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಕೆಲಕಾಲ ರಸ್ತೆ ತಡೆ ನಡೆಸಿ ಐಟಿ ದಾಳಿ ನಡೆಸಿದ್ದನ್ನು ಖಂಡಿಸಿದರು.
ಕಿಸಾನ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಲೋಹಾರ ಮಾತನಾಡಿ, ಆದಾಯ ತೆರಿಗೆ ಅ ಧಿಕಾರಿಗಳ ದಾಳಿ ರಾಜಕೀಯ ಪ್ರೇರೇಪಿತವಾಗಿದೆ. ಹಠಾತ್ ದಾಳಿ ನಡೆಸುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿ ವಿಪಕ್ಷಗಳನ್ನು ಹೆದರಿಸಿ, ಬೆದರಿಸಿ ಐಟಿ ಅಧಿಕಾರಿಗಳಂತವರನ್ನು ಬಿಜೆಪಿ ಬಳಸಿಕೊಂಡು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವುದು ಅಸಾಧ್ಯವಾದದ್ದು ಎಂದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ಶಂಕರಾವ್ ದೇಮುಖ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ್ ಮೊಕದ್ದೊಮ್ಮ ಅನ್ಸಾರಿ ಕಾಲೇಮಿರ್, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಯುನುಸ್ ಜರ್ದಿ, ಕಿಸಾನ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐನುಲ್ ಹಕ್ಕ, ಮುಖಂಡ ಚಂದಣ್ಣ ಪಾಟೀಲ ಮಂಟಕಿ, ಭೀಮಾಶಂಕರ ಖಂಡ್ರೆ, ಕಭೀರಾ ಬೇಗಂ, ಸೈಯದ್ ಮೊಸೀನ್, ಸಂಗಯ್ಯ ಸ್ವಾಮಿ ಬಾಳಿ, ಅವಿನಾಶ, ಪುರಸಭೆ ಸದಸ್ಯ ವೈಹೀದ್ ಜರ್ದಿ, ಫಯಾಜ್ ಅನ್ಸಾರಿ, ಆರೀಫ ಭೀಂಪೂರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.