ಚನ್ನರಾಯಪಟ್ಟಣ: ಆನೇಕರೆ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಜಯಮ್ಮ, ಉಪಾಧ್ಯಕ್ಷರಾಗಿ ತಿಮ್ಮೇಗೌಡ ಆಯ್ಕೆಯಾದರು. ತಾಲೂಕಿನ ದಂಡಿಗನಹಳ್ಳಿ ಹೋಬಳಿ ಆನೇಕರೆ ಗ್ರಾಪಂ ಚುನಾವಣೆ ಗುರುವಾರ ಸಂಜೆ 4ಗಂಟೆಗೆ ಪ್ರಾರಂಭವಾಗಿದ್ದು, ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರ ಹೆಸರನ್ನು ಘೋಷಣೆ ಮಾಡಿದರು. ಬುಧವಾರ ಸಣ್ಣಪುಟ ತಕರಾರಿನಿಂದ ಚುನಾವಣೆ ಮುಂದೂಡಲಾಗಿತ್ತು.
ಗುರುವಾರ ಚುನಾವಣೆ ನಡೆಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಜಯಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ ಅವಿರೋಧ ಎಂದು ಘೋಷಣೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣೇಗೌಡ ಹಾಗೂ ಎಂ.ಎಚ್ .ತಿಮ್ಮೇಗೌಡ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಡೆಯಿತು. ಈ ವೇಳೆ 19 ಮಂದಿ ಸದಸ್ಯರು ಹಾಜರಿದ್ದರು. ಆದರೆ, ಸದಸ್ಯರಾದ ಕೃಷ್ಣೇಗೌಡ, ಜಯಮ್ಮ, ಮಂಜಮ್ಮ, ಸುನಿತಾ ನಾಲ್ಕು ಮಂದಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ, ಉಳಿದ 15 ಮಂದಿ ಮತದಾನ ಮಾಡಿದ್ದು ಕೃಷ್ಣೇಗೌಡ ಒಂದು ಮತ ಪಡೆದರೆ, ತಿಮ್ಮೇಗೌಡ 14 ಮತ ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಜಯಮ್ಮ ಅಧಿಕಾರ ಸ್ವೀಕರಿಸಿ ಮಾತನಾಡಿ, ಆನೇಕರೆ ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಯಲ್ಲಿ ಕುಡಿಯುವನೀರಿನ ಸಮಸ್ಯೆ ಇದೆ. ಆದಷ್ಟು ಬಗೆಹರಿಸಲಾಗುವುದು, ಗ್ರಾಪಂ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಎಂಟು ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ
ಸಹಾಯಕ ಚುನಾವಣಾಧಿಕಾರಿ ಆಗಿ ಚನ್ನರಾಯಪಟ್ಟಣ ಪೇಟೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅನಿಲ್ ಸೇವೆ ಸಲ್ಲಿಸಿದರು.