Advertisement

ಸುಮಾಗೆ ಕಮಲ ಬಲ: ದೇವೇಗೌಡರ ಸ್ಪರ್ಧೆಗೆ ಬಂಡಾಯ

10:42 AM Mar 25, 2019 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡಿದ ಹಾಗೂ ಮೈತ್ರಿ ಸರಕಾರಕ್ಕೆ ಕಗ್ಗಂಟಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್‌ಗೆ ಬಿಜೆಪಿ ಬೆಂಬಲ ಘೋಷಿಸಿದೆ.

Advertisement

ಇದರಿಂದ ಮಂಡ್ಯ ಅಭ್ಯರ್ಥಿ ವಿಚಾರದಲ್ಲಿ ಬಹುದಿನಗಳಿಂದ ಇದ್ದ ಕುತೂಹಲಕ್ಕೆ ತೆರೆಬಿದ್ದಿದ್ದು, ಕಣ ಸ್ಪಷ್ಟಗೊಂಡಿದೆ. ಜೆಡಿಎಸ್‌ನ ನಿಖೀಲ್‌ ಕುಮಾರ ಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಬೆಂಬಲ ಸುಮಲತಾ ಶಕ್ತಿ ಹೆಚ್ಚಿಸಿದೆ.

ಬಿಜೆಪಿ “ಡಮ್ಮಿ’ ಅಭ್ಯರ್ಥಿ ಕಣಕ್ಕಿಳಿಸಲಿದೆ ಎಂಬ ಮಾತು ಇತ್ತಾ ದರೂ ಅಂತಿಮವಾಗಿ ಕೇಂದ್ರ ಬಿಜೆಪಿ ನಾಯ ಕರು ಸುಮಲತಾ ಬೆಂಬ ಲಿಸಿ “ಜಾಣ’ ಹೆಜ್ಜೆ ಇರಿಸಿದ್ದಾರೆ.

ಸುಮಲತಾ  ಅವರಿಗೆ ಪೂರ್ಣ ಬೆಂಬಲ ಘೋಷಿಸಿರುವುದಲ್ಲದೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅವರ ಪರ ಪ್ರಚಾರ ಮಾಡುವ ಸಾಧ್ಯತೆ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಕೇಂದ್ರ ಚುನಾವಣ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ ಶನಿವಾರ ರಾತ್ರಿ ಪತ್ರಿಕಾ ಗೋಷ್ಠಿ ನಡೆಸಿ, ಬಿಜೆಪಿಯ ರಾಷ್ಟ್ರೀಯ ಮಟ್ಟದ ಐದನೇ ಪಟ್ಟಿ ಹಾಗೂ ರಾಜ್ಯದ ಎರಡನೇ ಪಟ್ಟಿ ಪ್ರಕಟಿಸಿದ್ದಾರೆ. ಕೋಲಾರ ಮೀಸಲು ಕ್ಷೇತ್ರದಿಂದ ಅಚ್ಚರಿಯ ಆಯ್ಕೆಯಾಗಿ ಬೆಂಗಳೂರಿನ ಕಾಡು ಗೋಡಿ ವಾರ್ಡ್‌ನ ಪಾಲಿಕೆ ಸದಸ್ಯ ಮುನಿಸ್ವಾಮಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಕೋಲಾರ ಕ್ಷೇತ್ರಕ್ಕೆ ಛಲವಾದಿ ನಾರಾಯಣ ಸ್ವಾಮಿ ಮತ್ತು ಡಿ.ಎಸ್‌. ವೀರಯ್ಯ ಅವರ ಹೆಸರು ಪ್ರಸ್ತಾವವಾಗಿತ್ತು.

Advertisement

ಮುನಿಸ್ವಾಮಿ ಯಾರು?
ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿರುವ ದಲಿತ ಬಲಗೈ ಜಾತಿಗೆ ಸೇರಿದ ಎಸ್‌. ಮುನಿಸ್ವಾಮಿ ಕೋಲಾರ ಬಿಜೆಪಿಗೆ ಹೊಸಬರು, ಮಾಲೂರು ತಾಲೂಕು ಟೇಕಲ್‌ನ ಮೂಲದವರಾಗಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿಯವರಿಗೆ ಅತ್ಯಾಪ್ತರೆಂದು ಹೇಳಲಾಗುತ್ತಿದೆ. ಕೋಲಾರ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟು 12ಕ್ಕೂ ಹೆಚ್ಚು ಮಂದಿಯ ಹೆಸರುಗಳು ಪ್ರಸ್ತಾವವಾಗುತ್ತಿರುವಾಗಲೇ ಎಸ್‌. ಮುನಿಸ್ವಾಮಿ ಕೋಲಾರದಲ್ಲಿ ಬಿಜೆಪಿ ಮುಖಂಡ ಸಂತೋಷ್‌ ಅವರ ಸಭೆಯನ್ನು ಆಯೋಜಿಸಿದ್ದರು. ಇತ್ತೀಚೆಗೆ ಕೋಲಾರಕ್ಕೆ ಕೇಂದ್ರ ಕೃಷಿ ರಾಜ್ಯ ಸಚಿವರು ಆಗಮಿಸಿದ್ದಾಗಲೂ ಅವರ ಪಕ್ಕದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಜಿಲ್ಲೆಯ ಬಹುತೇಕ ಬಿಜೆಪಿ ಕಾರ್ಯಕರ್ತರಿಗೆ ಮುನಿಸ್ವಾಮಿಯ ಪರಿಚಯವಿಲ್ಲ. ಅವರಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಯ ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಿ ಅವರ ಭಾವಚಿತ್ರಗಳನ್ನು ಪ್ರಚುರಪಡಿಸಿ ಇವರೇ ಮುನಿಸ್ವಾಮಿ ಎಂದು ಕಾರ್ಯಕರ್ತರು ಪರಿಚಯಿಸಿಕೊಳ್ಳುತ್ತಿದ್ದುದು ಕಂಡು ಬಂತು.

ಮುದ್ದಹನುಮೇಗೌಡ ಬಂಡಾಯ?
ದೇವೇಗೌಡರಿಗೆ ಎದುರಾಗಿ ತುಮಕೂರು ಕಾಂಗ್ರೆಸ್‌ ಸಂಸದ ಎಸ್‌.ಪಿ. ಮುದ್ದಹನುಮೇ ಗೌಡರೂ ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. 11 ಗಂಟೆಗೆ ಟೌನ್‌ಹಾಲ್‌ನಿಂದ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಬಿ-ಫಾರಂ ಸಿಗದಿದ್ದಲ್ಲಿ ಆ ಬಗ್ಗೆ ಸೋಮವಾರ ಮಾತನಾಡುತ್ತೇನೆ. ನಾಮ ಪತ್ರ ಸಲ್ಲಿಸುವುದು ಮಾತ್ರ ನಿಶ್ಚಿತ ಎಂದು ಮುದ್ದ ಹನುಮೇಗೌಡರು ಹೇಳಿದ್ದಾರೆ.

ತುಮಕೂರಿನಿಂದ ದೇವೇಗೌಡರು ಸ್ಪರ್ಧಿಸು ವುದಾದರೆ ಅಭ್ಯಂತರವಿಲ್ಲ ಎಂದು ಹೇಳಿದ್ದ ಅವರೇ ಈಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದು  ಮೈತ್ರಿಯಲ್ಲಿ ಬಿರುಕು ಮೂಡುವ ಲಕ್ಷಣ ಎನ್ನಲಾಗಿದೆ.
ಮಂಡ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸು ತ್ತಿರುವ ಸುಮಲತಾ ಬೆಂಬಲಕ್ಕೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೇ ನಿಂತಿದ್ದಾರೆ ಎನ್ನಲಾಗಿದ್ದು, ತುಮಕೂರಿನಲ್ಲಿ ಮುದ್ದಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತೀರ್ಮಾನದ ಹಿಂದೆಯೂ ಅವರ ಕೈವಾಡ ಇರುವ ಶಂಕೆ ಮೂಡಿದೆ.

ಏಕಾಂಗಿಯಾಗುತ್ತಾರಾ ನಿಖೀಲ್‌ ?
ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಅಧಿಕೃತವಾಗಿ ಬೆಂಬಲ ನೀಡಿರುವುದು ಜೆಡಿಎಸ್‌ ವಲಯದಲ್ಲಿ ಸ್ವಲ್ಪ ಮಟ್ಟಿನ ಚಿಂತೆಗೆ ಕಾರಣವಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ನ ನಾಯಕರು ಒಳಗೊಳಗೆ ಸುಮಲತಾ ಪರ ಕೆಲಸ ಮಾಡುತ್ತಿರುವುದರ ಜತೆಗೆ ಈಗ ಬಿಜೆಪಿಯ ಬೆಂಬಲವೂ ಸಿಕ್ಕಿರುವುದರಿಂದ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಏಕಾಂಗಿಯಾಗುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ದಕ್ಷಿಣದ ಕುತೂಹಲ
ಎರಡನೇ ಪಟ್ಟಿಯಲ್ಲೂ ಬೆಂಗಳೂರು ದಕ್ಷಿಣ ಅಭ್ಯರ್ಥಿ ಪ್ರಕಟ ಮಾಡದಿ ರುವುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್‌ ಅವರೇ ಅಭ್ಯರ್ಥಿ ಎಂದು ರಾಜ್ಯ ಬಿಜೆಪಿ ನಾಯಕರು ಘೋಷಿಸಿದ್ದರು. ಆದರೆ ಹೆಸರು ಪ್ರಕಟವಾಗದೇ ಇರುವುದು ಚರ್ಚೆಗೆ ಕಾರಣವಾಗುತ್ತಿದೆ. ಬೆಂಗಳೂರು ಗ್ರಾಮಾಂತರ, ಕೊಪ್ಪಳ, ರಾಯಚೂರು, ಚಿಕ್ಕೋಡಿಗೆ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಮೊದಲ ಪಟ್ಟಿಯಲ್ಲಿ 21 ಮತ್ತು ಎರಡನೇ ಪಟ್ಟಿಯಲ್ಲಿ 1 ಕ್ಷೇತ್ರಕ್ಕೆ ಅಭ್ಯರ್ಥಿ, ಮತ್ತೂಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಪ್ರಕಟಿಸಿದ್ದು, ಇನ್ನೂ 5 ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮವಾಗಬೇಕಾಗಿದೆ.

ನಾಳೆ ಎಚ್‌ಡಿಡಿ ನಾಮಪತ್ರ
ತುಮಕೂರಿನಿಂದಲೇ ಕಣಕ್ಕಿಳಿಯಲಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿ ದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಘೋಷಿಸಿದ್ದಾರೆ. ತುಮಕೂರು ಸೇರಿ ಎಲ್ಲ ಜೆಡಿಎಸ್‌ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಅಂತಿಮವಾಗಿದೆ, ಯಾವುದೂ ಬಾಕಿ ಇಲ್ಲ ಎಂದಿದ್ದಾರೆ. ತುಮಕೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ – ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿವೆ. ವಿಜಯಪುರ ಒಂದು ಬಾಕಿಯಿದೆ ಎಂದಿದ್ದಾರೆ. ಈ ಮಧ್ಯೆ ತುಮಕೂರಿನಲ್ಲಿ ರವಿವಾರ ಕಾಂಗ್ರೆಸ್‌ – ಜೆಡಿಎಸ್‌ ನಾಯಕರ ಜತೆ ಎಚ್‌.ಡಿ. ದೇವೇಗೌಡ ನಡೆಸಬೇಕಾಗಿದ್ದ ಸಭೆ ರದ್ದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next