ಸುಳ್ಯ: ಬಿಜೆಪಿ ಸುಳ್ಯ ಮಂಡಲ ಸಮಿತಿಯ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕಕ್ಕೆ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ಕಚೇರಿಗೆ ಬೀಗ ಜಡಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕೋರ್ ಕಮಿಟಿ ಶಿಫಾರಸು ಮಾಡಿದವರನ್ನು ಅಧ್ಯಕ್ಷರನ್ನಾಗಿ ಮಾಡದಿರುವುದು ಅಸಮಾಧಾನಕ್ಕೆ ಕಾರಣ. ಮಂಡಲ ಸಮಿತಿ ಕೋರ್ ಕಮಿಟಿ ನಿರ್ಧಾರವನ್ನು ಸಂಪೂರ್ಣ ಅವಗಣಿಸಿರುವುದರಿಂದ ಸುಳ್ಯದ ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ತೀವ್ರ ಬೇಸರ ಆಗಿದೆ. ಇದನ್ನು ಸರಿಪಡಿಸುವ ತನಕ ಸುಳ್ಯ ಮಂಡಲ ಸಮಿತಿಯ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು.
ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಜಿಲ್ಲಾ ಪದಾಧಿಕಾರಿಗಳಾಗಿ ಆಯ್ಕೆಯಾದವರು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಮತ್ತು ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಮಾತ್ರ ಕೆಲಸ ಮಾಡುವುದೆಂದು ರವಿವಾರ ನಡೆದ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದು ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ, ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ. ಪಕ್ಷದ ಮಂಡಲ ಸಮಿತಿ, ಕೋರ್‌ಕಮಿಟಿ ನಿರ್ಧಾರವನ್ನು ಅವಗಣಿಸಲಾಗಿದೆ. ಇದನ್ನು ಮಾತುಕತೆ ಮಾಡಿ ಸರಿಪಡಿಸಬೇಕು ಎಂದು ಪ್ರಮುಖರು ಆಗ್ರಹಿಸಿದ್ದಾರೆ. ಈಗ ಇರುವ ಮಂಡಲ ಸಮಿತಿಯನ್ನೇ ಮುಂದುವರಿಸಬೇಕು ಎಂದು ಕೆಲವು ಕಾರ್ಯಕರ್ತರು ಹೇಳಿದ ಘಟನೆಯೂ ಸಭೆಯಲ್ಲಿ ನಡೆಯಿತು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಬೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಮುಖಂಡರಾದ ಎಸ್.ಎನ್. ಮನ್ಮಥ, ಎ.ವಿ. ತೀರ್ಥರಾಮ, ವೆಂಕಟ್ ದಂಬೆಕೋಡಿ, ಕೃಷ್ಣ ಶೆಟ್ಟಿ ಕಡಬ, ಮುಳಿಯ ಕೇಶವ ಭಟ್ ವೇದಿಕೆಯಲ್ಲಿದ್ದರು. ಪ್ರಮುಖರು ಭಾಗವಹಿಸಿದ್ದರು.