ಮಹಾರಾಷ್ಟ್ರದಲ್ಲಿ ಎನ್‌ಡಿಎ (ಬಿಜೆಪಿ-ಶಿವಸೇನೆ) ಹಾಗೂ ಯುಪಿಎ (ಕಾಂಗ್ರೆಸ್ -ಎನ್‌ಸಿಪಿ) ರಾಜಕೀಯ ಬದ್ಧವೈರಿಗಳು. ಆದರೆ, ಈ ವಿಧಾನಸಭೆ ಚುನಾವಣೆ ಯಲ್ಲಿ ನಿಜಕ್ಕೂ ಪೈಪೋಟಿ ನಡೆದಿದ್ದು ಬಿಜೆಪಿ ಹಾಗೂ ಶಿವಸೇನೆ ನಡುವೆ. ಈ ಮೈತ್ರಿ ಪಡೆ ಮತ್ತೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದ್ದರೂ ಬಿಜೆಪಿ ಹಿನ್ನಡೆ ಸಾಧಿಸಿರುವುದು ಹಾಗೂ ಶಿವಸೇನೆ ಮೇಲುಗೈ ಸಾಧಿಸಿರುವುದು ಕಂಡು ಬಂದಿದೆ.
2014ರ ಚುನಾವಣೆಯಲ್ಲಿ 122 ಸ್ಥಾನ ಪಡೆದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಪ್ರಯಾಸದಿಂದ 100ರ ಗಡಿ ದಾಟಿದೆ. 288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು. ಸರಳ ಬಹುಮತದ ಸನಿಹಕ್ಕೆ ಬರುವ ವಿಶ್ವಾಸ ಇರಿಸಿಕೊಂಡಿತ್ತು. ಆದರೆ, ಕಳೆದ ಬಾರಿಗಿಂತ 25 ಸ್ಥಾನ ಕಡಿಮೆಯಾಗಿದೆ.
ಈ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ರಾಷ್ಟ್ರೀಯ ಭದ್ರತೆ, ಹಿಂದುತ್ವ ವಿಚಾರಗಳನ್ನು ಬಿಜೆಪಿ ಮುನ್ನೆಲೆಗೆ ತಂದಿತ್ತು. ಈ ವಿಷಯವನ್ನಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ, ಇದ್ಯಾವುದೂ ನಿರೀಕ್ಷಿತ ಫಲ ನೀಡಿಲ್ಲ. ಬೇರೆ ಪಕ್ಷಗಳ ಮುಖಂಡರನ್ನು ಸೆಳೆದಿರುವುದು ಕೂಡ ಯಶಸ್ಸು ನೀಡಿಲ್ಲ.
ಆರ್ಥಿಕ ಬಿಕ್ಕಟ್ಟು, ಉದ್ಯೋಗ ಕುಸಿತ ಬಿಜೆಪಿಗೆ ಅಷ್ಟಾಗಿ ಪರಿಣಾಮ ಬೀರದಿದ್ದರೂ ತುಸು ಹೊಡೆತ ನೀಡಿರುವುದು ಸುಳ್ಳಲ್ಲ.
ವಿದರ್ಭದಲ್ಲಿ ಹಿನ್ನಡೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ತವರು ವಿದರ್ಭದಲ್ಲಿÉ ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಪಡೆದಿದೆ. ಕೃಷಿ ಹಾಗೂ ರೈತ ಸಮಸ್ಯೆಗಳೇ ಪ್ರಧಾನವಾಗಿರುವ ಈ ಭಾಗದಲ್ಲಿ ಬಿಜೆಪಿ ಹಿಂದುತ್ವ ವಿಷಯಗಳು ಫಲ ನೀಡಿಲ್ಲ. ಅಲ್ಲದೇ ನಿತಿನ್ ಗಡ್ಕರಿ ಅವರನ್ನು ಈ ಚುನಾವಣೆಯಲ್ಲಿ ಮುನ್ನೆಲೆಗೆ ತರದಿರುವುದು ಕೂಡ ಕಳಪೆ ಸಾಧನೆಗೆ ಕಾರಣಗಳಲ್ಲಿ ಒಂದಾಗಿದೆ. ಪಕ್ಷಕ್ಕೆ ಓಟು ತರುವಂತಹ ವರ್ಚಸ್ಸು ಹೊಂದಿರುವ ನಾಯಕ ಕೊರತೆ ಕೂಡ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್-ಎನ್‌ಸಿಪಿ ವ್ಯೂಹಾತ್ಮಕ ಕಾರ್ಯತಂತ್ರಗಳ ಮೂಲಕ ಈ ಚುನಾವಣೆ ನಡೆಸಿದ್ದರೂ ಬಿಜೆಪಿ ನೂರರ ಗಡಿ ದಾಟುವುದೂ ಕೂಡ ಕಷ್ಟವಾಗಿತ್ತು.
ಈ ಚುನಾವಣೆಯಲ್ಲಿ ಶಿವಸೇನೆ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿರುವುದು ಹಾಗೂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರನ್ನು ಭವಿಷ್ಯ ನಾಯಕನ್ನಾಗಿ ಬಿಂಬಿಸಿ ಯಶ ಸಾಧಿಸಿರುವುದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ.