ಬೆಂಗಳೂರು: ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲಾ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಸುದೀರ್ಘ ಸಭೆ ನಡೆಸಿದ್ದು ಬಂಡಾಯ ಶಮನ ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಈ ಸಭೆ ನಡೆದಿದ್ದು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಕೂಡ ಜತೆಗಿದ್ದರು. 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾದ ಬಳಿಕ ಸೃಷ್ಟಿಯಾಗಿರುವ ಪರಿಸ್ಥಿತಿ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಿದ್ದು ಬಂಡಾಯ ಶಮನದ ಬಗ್ಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ಪಕ್ಷದ ಕಡೆಯಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿ ಬಂಡಾಯ ಇತ್ಯರ್ಥಗೊಳಿಸಬೇಕು. ಪ್ರತಿದಿನವೂ ಟಿಕೆಟ್ ವಂಚಿತರ ಆಕ್ರೋಶದ ನುಡಿಗಳು ಮಾಧ್ಯಮಗಳಲ್ಲಿ ಹೈಲೈಟ್ ಆದರೆ ಎದುರಾಳಿಗಳಿಗೆ ನಾವಾಗಿಯೇ ಆಯುಧ ಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದ್ದು ಎಲ್ಲೆಲ್ಲಿ ಸಾಧ್ಯವಿದೆಯೋ ಆ ಎಲ್ಲ ಕಡೆಗಳಲ್ಲಿ ಖುದ್ದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ಸಂಧಾನ ಸಭೆ ನಡೆಸುವಂತೆ ವರಿಷ್ಠರಿಂದ ಬಂದ ಸೂಚನೆಯನ್ನು ರಾಧಾ ಮೋಹನ್ ಅಗರ್ವಾಲಾ ನೀಡಿದ್ದಾರೆಂದು ಗೊತ್ತಾಗಿದೆ.
ಪುತ್ರನಿಗೆ ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯ ಸ್ಪರ್ಧೆಗೆ ನಿರ್ಧರಿಸಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಜತೆಗೆ ರಾಜ್ಯದ ನಾಯಕರು ಸತತ ಸಂಪರ್ಕದಲ್ಲಿದ್ದಾರೆ. ಆದರೆ ಹಿಂದಕ್ಕೆ ಇಡುವ ಯಾವುದೇ ಲಕ್ಷಣವನ್ನು ಅವರು ಇದುವರೆಗೆ ತೋರಿಲ್ಲ. ಹೀಗಾಗಿ ಅಗತ್ಯ ಬಿದ್ದರೆ ಕೇಂದ್ರದ ಪ್ರಮುಖರು ಮಧ್ಯ ಪ್ರವೇಶಿಸುವ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಯಾರು, ಯಾವ ಸಂದರ್ಭದಲ್ಲಿ ಮಾತನಾಡುತ್ತಾರೆಂಬುದು ಬಗೆಹರಿದಿಲ್ಲ.
ಪ್ರವಾಸ :
ಇದರ ಜತೆಗೆ ರಾಷ್ಟ್ರ ಹಾಗೂ ರಾಜ್ಯ ನಾಯಕರ ಪ್ರವಾಸದ ಬಗ್ಗೆಯೂ ಚರ್ಚೆ ನಡೆದಿದೆ. ಕೆಲ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪ್ರತ್ಯೇಕ ಪ್ರಚಾರ ನಡೆಸುವ ಸಾಧ್ಯತೆಯಿದೆ. ಜತೆಗೆ ಪ್ರಧಾನಿ ಹೊರತುಪಡಿಸಿ ಇತರ ನಾಯಕರ ಜತೆಗೆ ಸ್ಥಳೀಯವಾಗಿ ಯಾರ್ಯಾರು ವೇದಿಕೆ ಹಂಚಿಕೊಳ್ಳಬೇಕೆಂಬ ಬಗ್ಗೆಯೂ ಚರ್ಚೆ ನಡೆದಿದೆ.