Advertisement

BJP ಅತೃಪ್ತಿ ಹೊರಹರಿವು ತಡೆದು ಏಕಸೂತ್ರ ಉಳಿಸಲು ಆರೆಸ್ಸೆಸ್‌ ಪ್ರವೇಶ

12:32 AM Aug 13, 2024 | Team Udayavani |

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ “ಮೈಸೂರು ಚಲೋ’ ಪಾದಯಾತ್ರೆ ನಡೆದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಬೇಗುದಿ ತೀವ್ರಗೊಂಡಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಹಾಗೂ ವಿರೋಧಿ ಕೂಟ ರಚನೆಯಾಗಿರುವುದು ವರಿಷ್ಠರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್‌ ನಾಯಕರ ಉಪಸ್ಥಿತಿಯಲ್ಲಿ ಇದೇ ತಿಂಗಳು ಸಮನ್ವಯ ಸಭೆ ನಡೆಸಲು ತೀರ್ಮಾನಿಸಲಾಗಿದೆ.

Advertisement

ಯತ್ನಾಳ್‌ ಬಣ ಬಹಿರಂಗ ಬಂಡಾಯ ಸಾರಿದ ಬೆನ್ನಲ್ಲೇ ಆರೆಸ್ಸೆಸ್‌ ಹಿನ್ನೆಲೆಯ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರೂ ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಮುನಿಸಿಕೊಂಡಿದ್ದರು. ಹೀಗಾಗಿ ಪಕ್ಷ ಹಳಿ ತಪ್ಪುತ್ತಿದೆ ಎಂಬುದನ್ನು ಅರಿತ ಸಂಘದ ಹಿರಿಯ ನಾಯಕರು ತುರ್ತು ಸಭೆ ಆಯೋಜಿಸಿದ್ದರು. ಬುಧವಾರ ಇದಕ್ಕೆ ಸಮಯವೂ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಭೆಯನ್ನು ರದ್ದು ಮಾಡಲಾಗಿದ್ದು, ಆ. 27ರಂದು ನಡೆಸಲು ತೀರ್ಮಾನಿಸಲಾಗಿದೆ.

ಈ ಸಭೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅವರ ವಿರೋಧಿ ಯತ್ನಾಳ್‌ ಅವರನ್ನೂ ಆಹ್ವಾನಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್ವಾಲ, ಸಂಘದ ಹಿರಿಯರು ಹಾಗೂ 25ಕ್ಕೂ ಹೆಚ್ಚು ಶಾಸಕರು ಭಾಗಿಯಾಗುತ್ತಾರೆ ಎನ್ನಲಾಗುತ್ತಿದೆ.

ಪಕ್ಷದಲ್ಲಿ ಏಕಸೂತ್ರ ತರುವುದಕ್ಕಾಗಿ ಸಮನ್ವಯ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಭೆ ಏಕೆ?
ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ಪಕ್ಷ ದಲ್ಲಿ ಪರ-ವಿರೋಧಿ ಹೇಳಿಕೆಗಳು ತೀವ್ರಗೊಂಡಿವೆ. ಕೆಲವರು ನೀಡುತ್ತಿರುವ ಹೇಳಿಕೆಗಳಿಂದ ಪಕ್ಷದಲ್ಲಿ ಅಪನಂಬಿಕೆ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಂವಹನ ಕೊರತೆ ಸೃಷ್ಟಿ ಯಾಗಿದೆ. ಆಂತರಿಕ ಶಿಸ್ತು, ಸಂಘಟನಾತ್ಮಕ ಚಟುವಟಿಕೆ ಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ. ಹೀಗಾಗಿ ಎಲ್ಲವನ್ನೂ ನಿಯಂತ್ರಣಕ್ಕೆ ತರಬೇಕು. ಪಕ್ಷ ಒಬ್ಬರ ಹಿಡಿತಕ್ಕೆ ಸೇರಬಾರದು ಎಂಬುದು ಸಂಘದ ಲೆಕ್ಕಾಚಾರವಾಗಿದೆ. ಹೀಗಾಗಿ ತತ್‌ಕ್ಷಣವೇ ವ್ಯವಸ್ಥೆ ಯನ್ನು ತಹಬದಿಗೆ ತರುವುದಕ್ಕಾಗಿ ಸಭೆ ಆಯೋಜಿಸ ಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

ಒಗ್ಗೂಡಿಸಿದ
ಲಿಂಬಾವಳಿ ಟ್ವೀಟ್‌
ವಿಜಯೇಂದ್ರ ವಿರುದ್ಧ ಧ್ವನಿ ಎತ್ತುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಶಾಸಕ ರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೆಲವು ದಿನಗಳ ಹಿಂದೆ ಮಾಡಿದ ಟ್ವೀಟ್‌ ಬಲ ತಂದಿದೆ. ಇದರ ಬೆನ್ನಲ್ಲೇ ಸಮಾನ ಮನಸ್ಕರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಲಿಂಬಾವಳಿ ಬಹಿರಂಗವಾಗಿ ಕಾಣಿಸಿಕೊಂಡ ಅನಂತರ ಭಿನ್ನರ ಬಣಕ್ಕೆ ಇನ್ನಷ್ಟು ಬಲ ಬಂದಿದೆ.

20ಕ್ಕೂ ಹೆಚ್ಚು
ಶಾಸಕರ ವಿರೋಧ?
ಬಿಜೆಪಿ ಮೂಲಗಳ ಪ್ರಕಾರ ಈಬೈಠಕ್‌ಗೆ ಮುಂಚಿತವಾಗಿ 20ಕ್ಕೂ ಹೆಚ್ಚು ಶಾಸಕರು ಒಂದೆಡೆ ಸಭೆ ಸೇರಲು ತೀರ್ಮಾನಿಸಿದ್ದಾರೆ. ಈ ಬೈಠಕ್‌ನಲ್ಲಿ ಚರ್ಚಿಸಬೇಕೆಂದು ನಿರ್ಧರಿಸಲಾಗಿದ್ದ ವಿಷಯಗಳೇ ಶಾಸಕರ ಸಭೆಯಲ್ಲಿ ಪ್ರಕಟವಾಗಲಿವೆ. ವಿಶೇಷವಾಗಿ ಪಕ್ಷ ಜಾತಿ ಆಧಾರಿತವಾಗಿ ಕೆಲವೇ ವ್ಯಕ್ತಿಗಳ ಹಿಡಿತಕ್ಕೆ ಸಿಲುಕುತ್ತಿರುವುದು ಪಕ್ಷ ನಿಷ್ಠರ ಆಕ್ಷೇಪಕ್ಕೆ ಕಾರಣವಾಗಿದೆ. ಶಾಸಕರಲ್ಲದ, ಹಿಂದೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸದ ವ್ಯಕ್ತಿಗಳ ಜತೆ ಸೇರಿ ಪಕ್ಷ ಮುನ್ನಡೆಸುತ್ತಿರುವುದು ಈ ಬಣದ ಕೆಂಗಣ್ಣಿಗೆ ಗುರಿಯಾಗಿದೆ. ಮೈಸೂರು ಚಲೋ ಪಾದಯಾತ್ರೆಗೆ ಸಂಘಟಕರು, ಜಿಲ್ಲಾಧ್ಯಕ್ಷ ರಿಂದ ಅನುದಾನ ಸಂಗ್ರಹಿಸಿದ್ದರೂ ವ್ಯಕ್ತಿ ಪೂಜೆ ಹಾಗೂ ಏಕಪಕ್ಷೀಯ ನಿರ್ಧಾರಗಳು ವಿಜೃಂಭಿಸಿವೆ ಎಂಬುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next