Advertisement

ಯಡಿಯೂರಪ್ಪ ರಾಜೀನಾಮೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

03:46 PM Jun 06, 2021 | Team Udayavani |

ಮಂಗಳೂರು: ಹೈಕಮಾಂಡ್ ಸೂಚನೆ ನೀಡಿದ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿದೆ. ಹಲವು ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ್ದು, ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಭಾರತೀಯ ಜನತಾ ಪಾರ್ಟಿಯ ವಿಶೇಷತೆ, ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶ. ರಾಷ್ಟ್ರ ನಾಯಕರು ಮತ್ತು ಪಕ್ಷದ ಸೂಚನೆಯಂತೆ ನಡೆಯುತ್ತೇನೆ ಎಂದು ಅವರು ಹೇಳಿರುವುದು ಆದರ್ಶ. ಪಕ್ಷ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ, ಅವರು ಅಧಿಕಾರಕ್ಕೆ ಅಂಟಿ ಕೂತವರಲ್ಲ ಎಂದು ಹೇಳಿದರು.

ಪಕ್ಷದಲ್ಲಿ ಸಿಎಂ ಬದಲಾವಣೆಯಂತಹ ಚರ್ಚೆಗಳಿಲ್ಲ, ಭಿನ್ನಾಭಿಪ್ರಾಯಗಳಿಲ್ಲ. ಯಡಿಯೂರಪ್ಪನವರು ನಮ್ಮ ಸರ್ವ ಸಮ್ಮತಿಯ ನಾಯಕ. ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲವೆಂದು ರಾಷ್ಟ್ರೀಯ ನಾಯಕರು ಹೇಳಿದ್ದಾರೆ,  ಇಂಥಹ ಚರ್ಚೆಗಳು ಅಪ್ರಸ್ತುತ, ಸದ್ಯ ಕೋವಿಡ್ ನಿರ್ವಹಣೆಯೇ ನಮ್ಮ ಜವಾಬ್ದಾರಿ ಎಂದು ಕಟೀಲ್ ಹೇಳಿದರು.

ಇದನ್ನೂ ಓದಿ:ಕೆಲವು ವಿದ್ಯಮಾನಗಳಿಂದ ನೋವಾಗಿ ಸಿಎಂ ‘ರಾಜೀನಾಮೆ’ ಹೇಳಿಕೆ ನೀಡಿದ್ದಾರೆ: ಅಶೋಕ್

ಯಡಿಯೂರಪ್ಪನವರು ಕಾರ್ಯಕರ್ತರಿಗೆ ಆದರ್ಶವಾಗಿ ಹೇಳಿಕೆ ಕೊಟ್ಟಿದ್ದಾರೆ, ಆದರೆ ಅಂಥಹ ಯಾವುದೇ ಚರ್ಚೆ ಪಕ್ಷದಲ್ಲಿಲ್ಲ. ಅವರು ಮುಖ್ಯಮಂತ್ರಿಯಾದ ಮೇಲೆ ವಿರೋಧ ಪಕ್ಷಗಳ ಟೀಕೆ ಮತ್ತು ಅಪವಾದ ಇತ್ತು, ಇದೆಲ್ಲದರ ನೋವು ಯಡಿಯೂರಪ್ಪನವರಲ್ಲಿ ಇರಬಹುದು. ಆದರೆ ನಾನೊಬ್ಬ ಕಾರ್ಯಕರ್ತ ಎನ್ನುವ ನೆಲೆಯಲ್ಲಿ ಇವತ್ತು ಸಂದೇಶ ಕೊಟ್ಟಿದ್ದಾರೆ ಎಂದರು.

Advertisement

ಪರ್ಯಾಯ ನಾಯಕತ್ವದ ಬಗ್ಗೆ ಅವರು ಸಹಜ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಹತ್ತಾರು ನಾಯಕರಿದ್ದಾರೆ ಎಂದು ಒಬ್ಬ ಹಿರಿಯ ನಾಯಕರಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ರೆಬಲ್ ಗಳಿಲ್ಲ ಎಂದ ಕಟೀಲ್, ಏನೇ ನೋವುಗಳಿದ್ದರೂ ಮಾತುಕತೆ ಮಾಡಲು ಸೂಚಿಸಿದ್ದೇವೆ. ಈ ಬಗ್ಗೆ ಎಲ್ಲರಿಗೂ ಹೇಳಿದ್ದೇವೆ. ಕೆಲವರ ಭಾವನೆ ಮತ್ತು ನೋವುಗಳು ಸರ್ಕಾರ ನಡೆಸುವಾಗ ಇರುತ್ತದೆ, ಅದನ್ನು ಸರಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ ಯತ್ನಾಳ್: ಗಂಭೀರ ಸ್ವರೂಪ ಪಡೆದ ಸಿಎಂ ಬದಲಾವಣೆ ಚರ್ಚೆ

ನಮ್ಮಲ್ಲಿ ಸಿಎಂ ಬದಲಾವಣೆ ಚರ್ಚೆಯಿಲ್ಲ, ಗೊಂದಲ, ಅಪಸ್ವರಗಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈಗ ಮಾತನಾಡಿದ ಶಾಸಕರಿಗೆ ಕರೆದು ಮಾತನಾಡಿದ್ದೇವೆ, ಮುಂದಿನ ತಿಂಗಳು ಅವರ ಭಾವನೆ ವ್ಯಕ್ತಪಡಿಸಲು ಸಭೆ ನಡೆಸುತ್ತೇವೆ ಎಂದ ನಳಿನ್ ಕುಮಾರ್ ಕಟೀಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next