Advertisement

ಬಿಜೆಪಿ ರಾಜ್ಯ ನಾಯಕರು ಮೌನಕ್ಕೆ ಶರಣು

06:30 AM Nov 12, 2018 | Team Udayavani |

ಬೆಂಗಳೂರು: ಚಿನ್ನದ ಗಟ್ಟಿ ಪಡೆದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಬಂಧನ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ ಈ ಬೆಳವಣಿಗೆ ಬಗ್ಗೆ ಬಿಜೆಪಿ ರಾಜ್ಯ ನಾಯಕರು ಮೌನಕ್ಕೆ ಶರಣಾಗಿದ್ದು, ಹೆಚ್ಚಿಗೆ ತಲೆ ಕೆಡಿಸಿಕೊಂಡಂತಿಲ್ಲ!

Advertisement

ಎರಡನೇ ಬಾರಿಗೆ ಜನಾರ್ದನ ರೆಡ್ಡಿ ಬಂಧನದಿಂದ ಅವರ ಪರಮಾಪ್ತ ಬಿಜೆಪಿಯ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಮತ್ತು ಬೆಂಬಲಿಗರು ಆತಂಕಕ್ಕೆ ಒಳಗಾದಂತಿದ್ದರೂ ಪಕ್ಷ ಇದನ್ನು ವ್ಯಕ್ತಿಗತ ಸಂಬಂಧಗಳಿಗೆ ಸೀಮಿತಗೊಳಿಸಿದಂತಿದೆ. ಪಕ್ಷದಿಂದ ಯಾವುದೇ ಜವಾಬ್ದಾರಿ ವಹಿಸಿಲ್ಲದ, ಉಚ್ಛಾಟಿತ ಜನಾರ್ದನರೆಡ್ಡಿ ಬಂಧನ ಪ್ರಕರಣದಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ನಂತರ ಅಕ್ರಮ ಗಣಿಗಾರಿಕೆ ಸಂಬಂಧ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆಗ ಬಿಜೆಪಿಯು ಅವರನ್ನು ಉಚ್ಛಾಟಿಸಿತ್ತು. ನಂತರ ಪಕ್ಷದ ವೇದಿಕೆ, ಬ್ಯಾನರ್‌ನಡಿ ಜನಾರ್ದನರೆಡ್ಡಿ ಕಾಣಿಸಿಕೊಂಡ ಉದಾಹರಣೆ ಕಡಿಮೆ. ಆದರೆ ಶ್ರೀರಾಮುಲು ಸೇರಿದಂತೆ ತಮ್ಮ ಆಪ್ತರು ಚುನಾವಣೆಗೆ ಸ್ಫರ್ಧಿಸಿದಾಗ ಪಕ್ಷದ ಪರ ನೇರವಾಗಿ ಪ್ರಚಾರ ನಡೆಸದಿದ್ದರೂ ಪರೋಕ್ಷವಾಗಿ ಪ್ರಚಾರ ನಡೆಸುವುದು, ಮತ ಯಾಚಿಸುವುದು, ತಮ್ಮ ಪ್ರಭಾವ ಬಳಸಿ ಮತದಾರರನ್ನು ಸೆಳೆಯುವ ಕಸರತ್ತು ನಿರಂತರವಾಗಿ ಮಾಡುತ್ತಿರುವುದು ರಹಸ್ಯವೇನೂ ಅಲ್ಲ ಎಂದು ಬಿಜೆಪಿ ಮುಖಂಡರೇ ಹೇಳುತ್ತಾರೆ.

ಜನಾರ್ದನರೆಡ್ಡಿ ಬಿಜೆಪಿಯಲ್ಲಿ ಇಲ್ಲದಿದ್ದರೂ ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಪರ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದರು. ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರವಾಗಿ ಕ್ಷೇತ್ರಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಪ್ರಚಾರ ನಡೆಸಿ ಬೆಂಬಲಿಸಿದ್ದರು. ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ತಮ್ಮ ಕಾರ್ಯಸೂಚಿಯನ್ನು ಗೌಪ್ಯವಾಗಿಯೇ ನಡೆಸುತ್ತಿರುವುದು ನಡೆದೇ ಇದೆ.

ಇಷ್ಟಾದರೂ ಬಿಜೆಪಿಯು ಜನಾರ್ದನರೆಡ್ಡಿ ಅವರಿಂದ ನಿರಂತರವಾಗಿ ಅಂತರ ಕಾಯ್ದುಕೊಂಡು ಬಂದಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು, ಬಿಜೆಪಿ ಬಗ್ಗೆ ಮಾತನಾಡಲು ಜನಾರ್ದನರೆಡ್ಡಿ ಯಾರು? ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇಷ್ಟಾದರೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀರಾಮುಲು ಪರ ಪ್ರಚಾರ ಸಭೆಯಲ್ಲಿ ಜನಾರ್ದನರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇತ್ತೀಚೆಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲೂ ಜನಾರ್ದನರೆಡ್ಡಿ ಹೆಸರು ಪ್ರಧಾನವಾಗಿ ಕೇಳಿಬಂದಿತ್ತು.

Advertisement

ಬಳ್ಳಾರಿ ಲೋಕಸಭೆ ಉಪಚುನಾವಣೆ ಸಂದರ್ಭದಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ಸಾವಿಗೆ ಸಂಬಂಧಪಟ್ಟಂತೆ ಜನಾರ್ದನರೆಡ್ಡಿ ನೀಡಿದ ಹೇಳಿಕೆ ಚುನಾವಣೆಯ ದಿಕ್ಕನ್ನೇ ಬದಲಾಯಿಸಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣವಾದ ಅಂಶಗಳಲ್ಲಿ ಪ್ರಮುಖವಾಗಿತ್ತು ಎಂಬ ಮಾತುಗಳೂ ಇವೆ. ಹಾಗಾಗಿ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತಿದ್ದರೂ ಪಕ್ಷದೊಂದಿಗೆ ಜನಾರ್ದನರೆಡ್ಡಿ ಹೆಸರು ಥಳಕು ಹಾಕಿಕೊಳ್ಳುತ್ತಿದೆ.

ತಲೆ ಕೆಡಿಸಿಕೊಳ್ಳದ ನಾಯಕರು
ಇದೀಗ ಚಿನ್ನದ ಗಟ್ಟಿ ಪಡೆದ ಆರೋಪಕ್ಕೆ ಸಂಬಂಧಪಟ್ಟಂತೆ ಜನಾರ್ದನರೆಡ್ಡಿ ಬಂಧನವಾಗಿದೆ. ಈ ಬೆಳವಣಿಗೆ ಬಗ್ಗೆ ಬಿಜೆಪಿ ನಾಯಕರು ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ. ಪಕ್ಷದಿಂದ ಯಾವುದೇ ಅಧಿಕೃತ ಜವಾಬ್ದಾರಿ ಇಲ್ಲದ ವ್ಯಕ್ತಿಯ ಬಂಧನ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ನಾಯಕರು ಹೇಳುತ್ತಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಯು ತನ್ನ “ಕ್ಲೀನ್‌ ಇಮೇಜ್‌’ ಬ್ರಾಂಡ್‌ಅನ್ನೇ ಪ್ರಧಾನವಾಗಿ ಪ್ರತಿಪಾದಿಸುತ್ತಿದೆ. ಈ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರದ ಹೆಜ್ಜೆಗಳನ್ನಿಡುತ್ತಿದೆ. ಹೀಗಾಗಿ ಬಿಜೆಪಿ ನಾಯಕರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಜತೆಗೆ ಪ್ರತಿಕ್ರಿಯೆ ನೀಡುವ ಇಲ್ಲವೇ ಪರ, ವಿರೋಧದ ಅಭಿಪ್ರಾಯ ವ್ಯಕ್ತಪಡಿಸುವ ಪ್ರಮೇಯವೂ ಇಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಇದೇ ಸಂದರ್ಭ ಬಳಸಿಕೊಂಡು ಬಿಜೆಪಿಗೂ, ಜನಾರ್ದನರೆಡ್ಡಿಗೂ ಯಾವುದೇ ನಂಟು ಉಳಿದಿಲ್ಲ ಎಂಬುದನ್ನು ಸ್ಪಷ್ಟ ಸಂದೇಶ ಸಾರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಕೆಲ ನಾಯಕರಿಗೆ ಬಿಸಿ ತುಪ್ಪ!
ಬಿಜೆಪಿಯು ಜನಾರ್ದನರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದರೂ, ಜನಾರ್ದನರೆಡ್ಡಿಯ ಪ್ರಭಾವ ಬಳಕೆಯನ್ನು ಖಂಡತುಂಡವಾಗಿ ಕಡಿದುಕೊಳ್ಳಲು ಮನಸ್ಸಿಲ್ಲ. ಬಳ್ಳಾರಿ ಮಾತ್ರವಲ್ಲದೆ, ಕೊಪ್ಪಳ, ಚಿತ್ರದುರ್ಗ, ಹಾವೇರಿ, ಗದಗ, ರಾಯಚೂರಿನಲ್ಲಿ ನಾಯಕ ಸಮುದಾಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದು, ಶ್ರೀರಾಮುಲು ಬೆಂಬಲಕ್ಕಿದ್ದಾರೆ. ಶ್ರೀರಾಮುಲು ಮೂಲಕ ಜನಾರ್ದನರೆಡ್ಡಿ ಕೂಡ ಈ ಜಿಲ್ಲೆಗಳಲ್ಲಿ ತಮ್ಮದೇ ಆದ ಪ್ರಭಾವಳಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಅದರ ಪ್ರಯೋಜನವನ್ನು ಕೆಲ ನಾಯಕರು, ಅಭ್ಯರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ರೆಡ್ಡಿ ಪರವಾಗಿ ದನಿ ಎತ್ತಲಾಗದೆ, ಇನ್ನೊಂದೆಡೆ ಸಿಸಿಬಿ ವಿರುದ್ಧವೂ ಕಿಡಿ ಕಾರಲಾಗದೆ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಇಡಿ, ಐಟಿ ಬಗ್ಗೆ ಕಾಂಗ್ರೆಸ್‌ ಆರೋಪಿಸುವಂತೆ ಸಿಸಿಬಿ ಬಗ್ಗೆ ಬಿಜೆಪಿ ಆರೋಪಿಸಿದರೆ ಜನಾರ್ದನರೆಡ್ಡಿಗೂ ಪಕ್ಷಕ್ಕೂ ನಂಟಿದೆ ಎಂಬ ಸಂದೇಶ ರವಾನೆಯಾಗಲಿದೆ ಎಂಬ ಭೀತಿಯಲ್ಲಿ ಕೆಲ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣವೊಂದರಲ್ಲಿ ಜನಾರ್ದನರೆಡ್ಡಿ ಅವರ ಬಂಧನವಾಗಿದ್ದು, ಇದರಲ್ಲಿ ರಾಜಕೀಯ ಬೆರೆಸಬಾರದು. ಹಿಂದೆ ಇಡಿ, ಐಟಿ ದಾಳಿ ನಡೆದಾಗ ರಾಜಕೀಯಪ್ರೇರಿತ ಎಂದು ಕಾಂಗ್ರೆಸ್‌ನವರು ಉಯಿಲೆಬ್ಬಿಸಿದರು. ಐಟಿ, ಇಡಿ ದಾಳಿ ನಡೆದಾಗ ಅವುಗಳನ್ನು ರಾಜಕೀಯಪ್ರೇರಿತ ಎನ್ನಬಾರದು. ಇದೇ ನಿಲುವನ್ನು ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳು ತೆಗೆದುಕೊಳ್ಳಬೇಕು. ಜನಾರ್ದನರೆಡ್ಡಿ ಅವರಿಗೆ ಪಕ್ಷ ಯಾವುದೇ ಜವಾಬ್ದಾರಿ ನೀಡಿಲ್ಲ. ಅವರ ವಿರುದ್ಧ ವ್ಯಕ್ತಿಗತ ಆರೋಪ ಪ್ರಕರಣವಾಗಿದ್ದು, ಜನಾರ್ದನರೆಡ್ಡಿ ಹಾಗೂ ಸಿಸಿಬಿಯವರಿಗೆ ಸಂಬಂಧಪಟ್ಟ ವಿಚಾರವಾಗಿದೆ. ಕಾನೂನು ಎಲ್ಲರಿಗೂ ಒಂದೇ. ಅದರಂತೆ ಕಾನೂನು ಕ್ರಮ ನಡೆಯಲಿ.
– ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ

ಜನಾರ್ದನರೆಡ್ಡಿ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಪ್ರಕಾರ ತನಿಖೆ ನಡೆಯಲಿ. ಯಾರೇ ತಪ್ಪಿತಸ್ತರಾಗಿದ್ದರೂ ಕ್ರಮ ಆಗಬೇಕು. ಪಕ್ಷದಲ್ಲಿರದ ಜನಾರ್ದನರೆಡ್ಡಿ ಅವರ ಬಂಧನದ ಬಗ್ಗೆ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಬಂಧನ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
– ಎನ್‌. ರವಿಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next