ಮಹಾನಗರ, ನ. 3: ಬರೋಬ್ಬರಿ 20 ವರ್ಷ ಗಳ ಅನಂತರ ಮಂಗಳೂರಿನ ಆತಿಥ್ಯದಲ್ಲಿ ನ. 5ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯ ಮಹತ್ವದ ಸಭೆಗೆ ಬಂದರು ನಗರಿ ಸರ್ವ ರೀತಿಯಿಂದ ಸಿದ್ಧಗೊಂಡಿದೆ. ನಗರದೆಲ್ಲೆಡೆ ಬಿಜೆಪಿ ಬಂಟಿಂಗ್ಸ್ ಹಾಗೂ ಧ್ವಜಗಳನ್ನು ಅಳವಡಿಸಲಾಗಿವೆ.
ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾ ರಿಯ ಡಿವೈಡರ್‌ಗಳಲ್ಲಿ ಬಿಜೆಪಿ ಧ್ವಜ, ನಗರದ ಎಂ.ಜಿ. ರಸ್ತೆಯ ವ್ಯಾಪ್ತಿಯಲ್ಲಿ ಬಿಜೆಪಿ ಬಂಟಿಂಗ್ಸ್, ವಿವಿಧ ಮುಖ್ಯ ರಸ್ತೆಗಳಲ್ಲಿ ಬಿಜೆಪಿ ಧ್ವಜಗಳನ್ನು ಅಳವಡಿಸಲಾಗಿವೆ. ಸಭೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತ ಬಿಜೆಪಿಯ ಅಗ್ರಗಣ್ಯ ನಾಯಕರ ಭಾವಚಿತ್ರಗಳ ಬ್ಯಾನರ್‌ಗಳನ್ನು ಅಳವಡಿಸಲಾಗಿವೆ. ನಗರದ ವಿವಿಧ ವೃತ್ತಗಳನ್ನು ಅಲಂಕರಿಸಲಾಗಿವೆ.
ನ.4ರಂದು ನಗರಕ್ಕೆ ಆಗಮನ : ನ. 5ರಂದು ಬೆಳಗ್ಗೆ 10 ಗಂಟೆಯಿಂದ ಸಭೆ ಆರಂಭಗೊಳ್ಳಲಿದ್ದು, ಇಡೀ ದಿನ ಮುಂದುವರಿ ಯಲಿದೆ. ಉದ್ಘಾಟನೆ ನೆರವೇರಿಸುವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಭೆ ಯಲ್ಲಿ ಪಾಲ್ಗೊಳ್ಳುವ ಕೆಲವು ಪ್ರಮುಖ ಸಚಿವರು, ನಾಯಕರು ನ. 4ರಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಸಭೆಯಲ್ಲಿ ಎಲ್ಲ ಕೋರ್ ಕಮಿಟಿ ಸದಸ್ಯರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಕೇಂದ್ರದ ಇಬ್ಬರು ಸಚಿವರು, ಬಿಜೆಪಿ ರಾಜ್ಯ ಪದಾಧಿಕಾರಿಗಳು, ಪ್ರಕೋಷ್ಟ ಗಳ ಸಂಚಾಲಕರು, ಸಹ ಸಂಚಾಲಕರು, ವಿಭಾಗೀಯ ಸಂಘಟನ ಕಾರ್ಯದರ್ಶಿಗಳು, ರಾಜ್ಯ ಕಾರ್ಯಕಾರಿಣಿ ಪದಾಧಿಕಾರಿಗಳು, ವಿವಿಧ ಘಟಕಗಳ ರಾಜ್ಯ ಮುಖ್ಯಸ್ಥರು, ಕೋರ್ ಕಮಿಟಿ ಸದಸ್ಯರು ಸಹಿತ ಸುಮಾರು 120 ಮಂದಿ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಅವರಿಗೆ ನಗರದ ಪ್ರಮುಖ ಹೊಟೇಲ್ ಸಮೂಹವೊಂದಕ್ಕೆ ಸೇರಿದ 2 ಹೊಟೇಲ್‌ಗಳಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
ನಗರದೆಲ್ಲೆಡೆ ವ್ಯಾಪಕ ಬಂದೋಬಸ್ತ್ : ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ನ. 4ರಂದು ಸಂಜೆಯಿಂದಲೇ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಪೊಲೀಸರು, ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗುತ್ತದೆ.
“ವಿವಿಧ ಸಮಿತಿಗಳಿಗೆ ಜವಾಬ್ದಾರಿ’ : ಬಿಜೆಪಿ ರಾಜ್ಯಕಾರ್ಯಕಾರಿಣಿ ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಪಕ್ಷದ 9 ಮಂಡಲಗಳನ್ನು ಒಳಗೊಂಡು ರಚಿಸಿರುವ 16 ವಿಭಾಗಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಕಾರ್ಯಾಲಯ ಸಮಿತಿ, ಸ್ವಾಗತ ಸಮಿತಿ, ವಸತಿ ಸಮಿತಿ, ಊಟೋಪಹಾರ ಸಮಿತಿ, ಸಭಾಂಗಣ ಸಮಿತಿ, ಅಲಂಕಾರ ಸಮಿತಿ ಸಹಿತ ವಿವಿಧ ಸಮಿತಿಗಳನ್ನು ರಚಿಸಿ ಆಯಾ ಜವಾಬ್ದಾರಿಗಳನ್ನು ನೀಡಲಾಗಿದೆ.
–ಸುದರ್ಶನ್ ಮೂಡುಬಿದಿರೆ, ಅಧ್ಯಕ್ಷರು, ಬಿಜೆಪಿ ದ.ಕ.