Advertisement

ಬಿಜೆಪಿ ‘ಲೋಕ’ತಾಲೀಮು

04:30 AM Oct 03, 2018 | Karthik A |

ಬೆಂಗಳೂರು: ಲೋಕಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ರಾಜ್ಯ ಬಿಜೆಪಿ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿದ್ದು, ಬಹುತೇಕ ಅಂತಿಮಗೊಳಿಸುವ ಹಂತದಲ್ಲಿದೆ. ಬಾಕಿ 11 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ತೆರೆಮರೆಯಲ್ಲೇ ಕಸರತ್ತು ಮುಂದುವರಿಸಿರುವ ನಾಯಕರು ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯ ಆಧಾರದ ಮೇಲೆ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಗೆ ಗೌಪ್ಯ ವರದಿಯನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ರಾಜ್ಯ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿದು ಸರಕಾರ ರಚನೆಯಾದ ಬಳಿಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿತ್ತು. ಚುನಾವಣೆಗೆ ವರ್ಷ ಬಾಕಿ ಇರುವಂತೆಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿರುವ ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿಗತಿ, ಸಂಸದರ ಕಾರ್ಯವೈಖರಿ, ಪಕ್ಷದ ವರ್ಚಸ್ಸು ಇತರ ಮಾಹಿತಿಯನ್ನು ಪಡೆದಿದ್ದರು.

ಜತೆಗೆ ಕಾಂಗ್ರೆಸ್‌, ಜೆಡಿಎಸ್‌ ಸಂಸದರಿರುವ ಕ್ಷೇತ್ರಗಳಲ್ಲೂ ಪಕ್ಷದ ಸಂಘಟನೆ, ಸಂಭವನೀಯ ಅಭ್ಯರ್ಥಿಗಳು, ಅವರ ಸಂಘಟನಾ ಸಾಮರ್ಥ್ಯ, ಸೋಲು- ಗೆಲುವಿನ ಲೆಕ್ಕಾಚಾರದ ಬಗ್ಗೆಯೂ ರಹಸ್ಯ ಸಮೀಕ್ಷಾ ವರದಿ ಪಡೆದುಕೊಂಡಿದ್ದರು. ಜತೆಗೆ ಪಕ್ಷದ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನು ಅಮಿತ್‌ ಶಾ ನೀಡಿದ್ದರು ಎನ್ನಲಾಗಿತ್ತು.

ವರಿಷ್ಠರಿಗೆ ರಹಸ್ಯ ವರದಿ ರವಾನೆ
ಈಗ ಎರಡನೇ ಹಂತದಲ್ಲಿ 28 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳು, ಬದಲಿ ಅಭ್ಯರ್ಥಿಗಳು, ಸಂಭಾವ್ಯ ಅಭ್ಯರ್ಥಿಗಳು ಸಹಿತ ಆಕಾಂಕ್ಷಿಗಳ ಪಟ್ಟಿಯೊಂದನ್ನು ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಪಕ್ಷದ ವರಿಷ್ಠರಿಗೆ ಗೌಪ್ಯವಾಗಿ ನೀಡಿದ್ದಾರೆ. ಅದರಲ್ಲಿ 17 ಕ್ಷೇತ್ರಗಳಿಗೆ ಬಹುತೇಕ ಅಂತಿಮಗೊಳ್ಳಬಹುದಾದ ಅಭ್ಯರ್ಥಿಗಳ ಹೆಸರನ್ನೇ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ಒಮ್ಮತದ ಅಭ್ಯರ್ಥಿ ಸ್ಪರ್ಧಿಸುವ ಕ್ಷೇತ್ರದಲ್ಲಿ ಪ್ರತಿಯಾಗಿ ಬಿಜೆಪಿಯಿಂದ ಯಾವ ಅಭ್ಯರ್ಥಿಗಳಿದ್ದರೆ ಸೂಕ್ತ ಎಂಬ ಬಗ್ಗೆಯೂ ವರದಿಯಲ್ಲಿ ಪ್ರಸ್ತಾವಿಸಲಾಗಿದೆ. ಹಾಲಿ ಕಾಂಗ್ರೆಸ್‌, ಜೆಡಿಎಸ್‌ನ ಸಂಸದರಿರುವ ಕ್ಷೇತ್ರದಲ್ಲಿ ಸಂಭಾವ್ಯ 2-3 ಅಭ್ಯರ್ಥಿಗಳ ಹೆಸರನ್ನೂ ಸೂಚಿಸಲಾಗಿದೆ. ಸದ್ಯದ ರಾಜಕೀಯ ಸ್ಥಿತಿಗತಿ ಆಧರಿಸಿ ಪಟ್ಟಿ ಸಿದ್ಧಪಡಿಸಲಾಗಿದ್ದು, ಮುಂದಿನ ರಾಜಕೀಯ ವಿದ್ಯಮಾನಗಳು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅನಂತರದ ಬೆಳವಣಿಗೆ ಆಧರಿಸಿ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.

Advertisement

ಶಾ ಸೂಚಿಸಿದ್ದ ಮಾನದಂಡದಂತೆ ವರದಿ
ಈ ಹಿಂದೆ ಗೌಪ್ಯ ಸಮೀಕ್ಷಾ ವರದಿ ಪಡೆದಿದ್ದ ಅಮಿತ್‌ ಶಾ ಅವರು ಅಭ್ಯರ್ಥಿಗಳ ಪರಿಗಣನೆಗೆ ಕೆಲವು ಮಾನದಂಡ ಅನುಸರಿಸುವಂತೆ ಸೂಚಿಸಿದ್ದರು. ಪ್ರಮುಖವಾಗಿ ಸಂಘ ಪರಿವಾರದವರೊಂದಿಗಿನ ಒಡನಾಟ, ಕಾರ್ಯಕರ್ತರೊಂದಿಗಿನ ಸಂಪರ್ಕ, ಜನಪ್ರಿಯತೆ- ಖ್ಯಾತಿ ಇಲ್ಲದಿದ್ದರೂ ವರ್ಚಸ್ಸು ಬೆಳೆಸಿಕೊಂಡು ಸಚ್ಚಾರಿತ್ರ್ಯವುಳ್ಳವರು, ಕಳಂಕರಹಿತ ಸಂಘಟನಾ ಚಾತುರ್ಯವಿರುವವರನ್ನು ಗುರುತಿಸುವಂತೆ ಸೂಚನೆ ನೀಡಿದ್ದರು. ಆ ಮಾನದಂಡ ಆಧರಿಸಿಯೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಯಡಿಯೂರಪ್ಪ ಅವರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭಾ ಚುನಾವಣೆಗೆ ಸಿದ್ಧತೆ
ಲೋಕಸಭಾ ಚುನಾವಣೆ ತಯಾರಿ ನಡೆದಿದ್ದು, 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇದು ಕೇವಲ ಸ್ವಚ್ಛತಾ ಕಾರ್ಯಕ್ರಮವಲ್ಲ. ಲೋಕಸಭಾ ಚುನಾವಣೆಗೆ ಮುನ್ನುಡಿ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಅವರ ರಾಜ್ಯ ಭೇಟಿ ಇನ್ನೂ ನಿಗದಿಯಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

— ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next