ಬೆಂಗಳೂರು: ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತು ಗುರುವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಲ್ಲದೆ, ಬಿಜೆಪಿ ನಾಯಕರಿಂದ ಲೇವಡಿಗೆ ಒಳಗಾಯಿತು.
“ಗಾಂಧಿ ಕುಟುಂಬವು ಸುಮಾರು ಏಳು ದಶಕಗಳ ಕಾಲ ದೇಶವನ್ನು ಆಳಿದೆ. 3-4 ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ. ಸಂಕಷ್ಟದಲ್ಲಿರುವ ಸೋನಿಯಾ ಜತೆಗೆ ನಿಲ್ಲಬೇಕು. ಆಗ ಮಾತ್ರ ನಾವು ತಿನ್ನುವ ಎರಡು ಹೊತ್ತಿನ ಊಟಕ್ಕೆ ಸಾರ್ಥಕ ಬರುತ್ತದೆ’ ಎಂದು ರಮೇಶ್ ಕುಮಾರ್ ಹೇಳಿದ್ದರು.
ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಸತ್ಯ ಬಾಯ್ಬಿಟ್ಟಿದ್ದಾರೆ’ ಎಂದು ಬಿಜೆಪಿ ಲೇವಡಿ ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಗೂ ಇತರ ಪ್ರಮುಖರೆಲ್ಲರೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸುಧಾಕರ್, ಬಿ.ವೈ.ವಿಜಯೇಂದ್ರ ಅವರು ರಮೇಶ್ ಕುಮಾರ್ ಹೇಳಿಕೆಯ ವೀಡಿಯೋ ಟ್ಯಾಗ್ ಮಾಡಿ “ಇದು ಕಾಂಗ್ರೆಸ್ ಮುತ್ಸದ್ದಿಯ ಮಾತು’ ಎಂದು ವ್ಯಂಗ್ಯವಾಡಿದ್ದಾರೆ.
ಕ್ಷಮೆ ಕೇಳಲಿ: ಸುನಿಲ್ :
ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ವಿಚಾರಣೆಗೆ ವಿರೋಧ ವ್ಯಕ್ತಪಡಿಸುವವರು ಈ ಹಿಂದೆ ಒಂದಲ್ಲ ಒಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು. ಹೀಗಾಗಿ, ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು. ರಮೇಶ್‌ಕುಮಾರ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಒಳಪಡಿಸಬೇಕು. ಆ ಮಾತುಗಳು ಕಾಂಗ್ರೆಸ್‌ನ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.