ಬೆಂಗಳೂರು: ರಾಜ್ಯ ಬಿಜೆಪಿಯ “ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ‘ಪರಿವರ್ತನೆ ಆಗಬೇಕಾಗಿರುವುದು ಜನರಲ್ಲ, ಬಿಜೆಪಿ ನಾಯಕರು’ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ‘ರಾಜ್ಯದ ಜನರು ಬಹಳ ಪ್ರಬುದ್ಧರಿದ್ದಾರೆ. ಅವರಿಗೆ ಯಾವ ಪಕ್ಷ, ಯಾವ ನಾಯಕ ಹೇಗೆ ಎನ್ನುವುದು ಗೊತ್ತಿದೆ’ ಎಂದರು.
‘ರ‍್ಯಾಲಿ ಉದ್ಘಾಟನೆ ಮಾಡಲು ಬಂದಿರುವುದು ಯಾರು ? ಅಮಿತ್ ಶಾ, ನೇತೃತ್ವ ವಹಿಸಿರುವುದು ಯಾರು? ಯಡಿಯೂರಪ್ಪ. ಇಬ್ಬರೂ ಜೈಲಿಗೆ ಹೋಗಿ ಬಂದವರು’ ಎಂದು ಲೇವಡಿ ಮಾಡಿದರು.
‘ಯಡಿಯೂರಪ್ಪ ಅವರ ಕಾಲೆಳೆಯಲು ಬಿಜೆಪಿಯಲ್ಲೇ ಸಾಕಷ್ಟು ಜನರು ಇದ್ದಾರೆ. ಅನಂತ್ ಕುಮಾರ್,ಈಶ್ವರಪ್ಪ,ಸಿ.ಟಿ.ರವಿ ಮತ್ತೆ ಅದ್ಯಾರೋ ಸಂತೋಷ್ ಅಂತ ಇದ್ದಾರಲ್ಲಾ..ಅವರೆಲ್ಲಾ ಕಾಲೆಳೆಯಲು ಸಿದ್ದವಾಗಿ ನಿಂತಿದ್ದಾರೆ’ ಎಂದರು.
‘ಬಿಜೆಪಿಗೆ ಚರಿತ್ರೆ ತಿರುಚುವುದು ಗೊತ್ತಿದೆ.ಆದರೆ ಚರಿತ್ರೆ ಓದಿ ಗೊತ್ತಿಲ್ಲ. ಅವರು ನಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು’ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿಯ ಯಾತ್ರೆಗೆ ಗುರುವಾರ ಚಾಲನೆ ದೊರಕಿದೆ.