Advertisement

ಬಿಜೆಪಿ ಶಿವಸೇನೆ ನಡುವೆ ಕಗ್ಗಂಟಾದ ಸೀಟು ಹಂಚಿಕೆ ಗೊಂದಲ

10:32 AM Sep 16, 2019 | Team Udayavani |

ಮುಂಬಯಿ: 2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಡಿ ಸ್ಪರ್ಧಿಸಿ ಯಶಕಂಡಿದ್ದ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಿಗಾಗಿ ಸೀಟುಹಂಚಿಕೆ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ಸದ್ಯಕ್ಕೆ ತೆರೆಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಈ ಬಾರಿಯ ಸೀಟು ಹೊಂದಾಣಿಕೆ ವಿಷಯದಲ್ಲಿ ಭಾರತೀಯ ಜನತಾ ಪಕ್ಷ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿರುವುದು ಕೇಸರಿ ಪಕ್ಷದ ದೀರ್ಘಕಾಲೀನ ಮಿತ್ರನ ಕಣ್ಣು ಕೆಂಪಾಗಿಸಿದೆ.

Advertisement

ಕಳೆದ ಬಾರಿ ಎರಡೂ ಪಕ್ಷಗಳು ಗೆದ್ದಿರುವ ವಿಧಾನಸಭಾ ಸೀಟುಗಳನ್ನು ತಮ್ಮತಮ್ಮಲ್ಲೇ ಇರಿಸಿಕೊಂಡು ಬಳಿಕದ ಹೆಚ್ಚುವರಿ ಸೀಟುಗಳನ್ನು ಸಮನಾಗಿ ಹಂಚಿಕೊಳ್ಳುವ ಸೂತ್ರವನ್ನು ಬಿಜೆಪಿಯು ಶಿವಸೇನಾ ನಾಯಕ ಉದ್ಭವ್ ಠಾಕ್ರೆ ಅವರ ಮುಂದೆ ಇಟ್ಟಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಲೆಕ್ಕಾಚಾರದ ಪ್ರಕಾರ ಶಿವಸೇನೆಗೆ ಸುಮಾರು 115 ಸೀಟು ದಕ್ಕಲಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯು 63 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಬಿಜೆಪಿ 123 ಸ್ಥಾನಗಳನ್ನು ಪಡೆದುಕೊಂಡಿತ್ತು.

ಲೊಕಸಭಾ ಚುನಾವಣೆಗಳಿಗೂ ಮೊದಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸಮಾನ ಸೀಟು ಹಂಚಿಕೆ ಮಾಡಿಕೊಳ್ಳುವ ಭರವಸೆಯನ್ನು ನೀಡಿದ್ದರು ಎಂದು ಶಿವಸೇನೆ ತನ್ನ ತಕರಾರು ಎತ್ತಿತ್ತು. ಈಗಲೂ ಸಹ ಶಿವಸೇನಾ ವರಿಷ್ಠರು 128 ಸ್ಥಾನಗಳನ್ನು ಪಡೆದುಕೊಳ್ಳಲು ಸಿದ್ಧರಿಲ್ಲ, ಶಿವಸೇನೆ ಈಗಲೂ ಸಹ 135 ಸ್ಥಾನಗಳಿಗೆ ಬೇಡಿಕೆ ಇಡುತ್ತಿದೆ.

ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ಈಗಾಗಲೇ ಹಲವಾರು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷದ ಹಲವು ಪ್ರಮುಖ ಮುಖಂಡರನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿವೆ.

Advertisement

ಎರಡೂ ಪಕ್ಷಗಳಲ್ಲಿ ಚುನಾವಣಾ ತಯಾರಿ ಈಗಾಗಲೇ ಜೋರಾಗಿದೆ. ಇದೆಲ್ಲವನ್ನೂ ನೋಡುವಾಗ ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಪ್ರತ್ಯೇಕವಾಗಿ ಮತದಾರರ ಬಳಿ ಹೋದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next